ರಾಜ್ಯದಲ್ಲಿರುವುದು ಜೆಸಿಬಿ ಸರ್ಕಾರ: ಸುರೇಶ್ ಕುಮಾರ್

ಸೋಮವಾರ, 4 ಮೇ 2015 (16:06 IST)
ಸರ್ಕಾರವು ನಗರದಲ್ಲಿನ ಸರ್ಕಾರಿ ಹಾಗೂ ಕೆರೆ ಒತ್ತುವರಿ ಭೂಮಿಯ ತೆರವಿಗೆ ಮುಂದಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಸುರೇಶ್ ಕುಮಾರ್ ಅವರು ಪ್ರತಿಕ್ರಿಯಿಸಿದ್ದು, ನಮ್ಮ ರಾಜ್ಯದಲ್ಲಿರುವುದು ಜೆಸಿಬಿ ಅಥವಾ ಬುಲ್ಡೋಜರ್ ಸರ್ಕಾರ ಎಂದು ಸಿಎಂ ಸಿದ್ದರಾಮಯ್ಯ ಸರ್ಕಾರವನ್ನು ಟೀಕಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರವು ಕೆರೆ ಒತ್ತುವರಿಯಾಗಿದೆ ಎಂಬ ಸಬೂಬನ್ನು ಹೇಳಿಕೊಂಡು ಸಾರ್ವಜನಿಕರಿಗೆ ಅನ್ಯಾಯ ಎಸಗಲು ಮುಂದಾಗಿದೆ. ಸರ್ಕಾರದ ಈ ಕ್ರಮ ಸರಿಯಲ್ಲ ಎಂದ ಅವರು, ನಗರದಲ್ಲಿರುವ ಕೆಂಪೇಗೌಡ ಬಸ್ ನಿಲ್ದಾಣ, ರಾಜ್ಯ ಪರಿಸರ ನಿಯಂತ್ರಣಾ ಇಲಾಖೆ, ಅಷ್ಟೇ ಅಲ್ಲದೆ ಕೆಪಿಸಿಸಿ ಕಚೇರಿಯೂ ಕೂಡ ಕೆರೆಯ ಜಾಗದಲ್ಲಿಯೇ ಇವೆ. ಅವುಗಳನ್ನು ಮತ್ತೆ ಕೆರೆ ಜಾಗವೆಂದು ಬಿಟ್ಟುಕೊಡಲು ಸರ್ಕಾರ ಸಿದ್ಧವಿದೆಯೇ ಎಂದು ಪ್ರಶ್ನಿಸಿದರು.

ಬಳಿಕ ಸರ್ಕಾರ ತನ್ನ ನೀತಿಗಳ ಮೂಲಕ ಬಡ ಸಾರ್ವಜನಿಕರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಆದ್ದರಿಂದ ಈ ಸರ್ಕಾರವನ್ನು ಕಾಂಗ್ರೆಸ್ ಸರ್ಕಾರ ಎನ್ನದೆ ಬುಲ್ಡೋಜರ್ ಸರ್ಕಾರ ಎನ್ನಬೇಕಿದೆ ಎಂದು ಸರ್ಕಾರವನ್ನು ಟೀಕಿಸಿದರು.  

ಸಾರ್ವಜನಿಕರು ಕೆರೆಗಳಿಗೆ ಸೇರಿದ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ತೆರವಿನ ಮೂಲಕ ವಶಪಡಿಸಿಕೊಳ್ಳಲು ಮುಂದಾಗಿರುವ ಸರ್ಕಾರ, ಕಾಡುಗೋಡಿ, ಬಾಣಸವಾಡಿ ಸೇರಿದಂತೆ ನಗರದ ಇತರೆಡೆ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸುರೇಶ್ ಕುಮಾರ್ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ