ಮುರಿದುಬಿದ್ದ ಜೆಡಿಎಸ್-ಕಾಂಗ್ರೆಸ್ ಮೈತ್ರಿ: ಸಿಎಂಗೆ ಜಮೀರ್ ಅಹ್ಮದ್ ಕ್ಷಮೆ

ಶನಿವಾರ, 28 ನವೆಂಬರ್ 2015 (15:53 IST)
ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಮುರಿದುಬಿದ್ದ ಹಿನ್ನೆಲೆಯಲ್ಲಿ   ಜೆಡಿಎಸ್ ನಾಯಕರಾದ ಜಮೀರ್ ಅಹ್ಮದ್ ಸೇರಿದಂತೆ ಕೆಲವು ಜೆಡಿಎಸ್ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಅವರ ಬಳಿ ಕ್ಷಮೆ ಯಾಚಿಸಿದ್ದಾರೆ. ಮೈತ್ರಿ ಕುರಿತಂತೆ ದೇವೇಗೌಡರು ಭರವಸೆ ನೀಡಿದ  ಬಳಿಕ ಕಾಂಗ್ರೆಸ್ ಉಸ್ತುವಾರಿ  ದಿಗ್ವಿಜಯ್ ಸಿಂಗ್ ಜತೆ ಈ ಮುಖಂಡರು ಮಾತುಕತೆ ನಡೆಸಿದ್ದರು.

ಆದರೆ ದೇವೇಗೌಡರು ತಾವು ಮೈತ್ರಿ ಕುರಿತಂತೆ ಏನೂ ಹೇಳಿಲ್ಲವೆಂದೂ ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲವೆಂದು  ತಿಳಿಸಿರುವುದರಿಂದ ಮೈತ್ರಿ ಮುರಿದುಬಿದ್ದಿದೆ. ಮೈತ್ರಿ ಮಾತುಕತೆ ಮುರಿದುಬಿದ್ದಿದ್ದಕ್ಕೆ ಜಮೀರ್ ಅಹ್ಮದ್ ಖಾನ್, ಚೆಲುವನಾರಾಯಣ ಸ್ವಾಮಿ, ಅಖಂಡ ಶ್ರೀನಿವಾಸ ಮೂರ್ತಿ ಸಿಎಂ ಸಿದ್ದರಾಮಯ್ಯ ಅವರಲ್ಲಿ ಕ್ಷಮೆಯಾಚಿಸಿದರು.

 ದೇವೇಗೌಡರು ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ  ಮೈತ್ರಿಗೆ ಹಸಿರು ನಿಶಾನೆ ತೋರಿದ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕ ಜಮೀರ್ ಅಹ್ಮದ್, ಚೆಲುವ ನಾರಾಯಣ ಸ್ವಾಮಿ ಮುಂತಾದವರು  ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಜತೆ ಮಾತುಕತೆ ನಡೆಸಿದ್ದರು. ಆದರೆ ಕುಮಾರಸ್ವಾಮಿ ಅವರು ದೇವೇಗೌಡರನ್ನು ಭೇಟಿ ಮಾಡಿದ ಬಳಿಕ  ದೇವೇಗೌಡರು ಯು ಟರ್ನ್ ಹೊಡೆದು ಯಾವ ಪಕ್ಷದ ಜತೆಯೂ ಮಾತುಕತೆಯಿಲ್ಲವೆಂದು ಹೇಳಿದ್ದರಿಂದ ಮೈತ್ರಿ ಮುರಿದುಬಿದ್ದಿತ್ತು.

ಇದರಿಂದ ಮೈತ್ರಿ ಕುರಿತು ಮಾತನಾಡಿದ್ದ ಜಮೀರ್ ಅಹ್ಮದ್ ಮುಜುಗರದ ಸ್ಥಿತಿಗೆ ಈಡಾಗಿದ್ದರು.  ಕುಮಾರಸ್ವಾಮಿ ಕೂಡ  ಇಂತಹ ಹುಡುಗಾಟಿಕೆ ಮಾಡಿದರೆ ಶಿಸ್ತಿನ ಕ್ರಮ ಕೈಗೊಳ್ಳಬೇಕಾಗುತ್ತದೆ. ಮೂರು, ನಾಲ್ಕು ಜನರಿಗೋಸ್ಕರ ಪಕ್ಷವನ್ನು ಬಲಿಕೊಡಲು ಆಗು ವುದಿಲ್ಲ. ಇನ್ನು ಮುಂದಿನ ದಿನಗಳಲ್ಲಿ ನಾಲ್ಕು ಗೋಡೆಗಳ ನಡುವೆ ಇಂತಹ ವಿಷಯ ಚರ್ಚೆ ಮಾಡಲಿ. ಆದರೆ ಸಾರ್ವಜನಿಕ ವೇದಿಕೆಯಲ್ಲಿ ಚರ್ಚೆ ಮಾಡಿದರೆ ಶಿಸ್ತಿನ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದ್ದರು. ಮೈತ್ರಿ ಮುರಿದುಬಿದ್ದ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕ್ಷಮೆ ಯಾಚಿಸಿದರು. 

ವೆಬ್ದುನಿಯಾವನ್ನು ಓದಿ