ಜೆಡಿಎಸ್‌ನ ನೂತನ, ತಾತ್ಕಾಲಿಕ ಕಚೇರಿ ಹೆಣ್ಣೂರಿನಲ್ಲಿ ಆರಂಭ

ಸೋಮವಾರ, 16 ಫೆಬ್ರವರಿ 2015 (16:03 IST)
ತಮ್ಮ ಪಕ್ಷದ ಹಿಂದಿನ ಕಚೇರಿಯನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟ ಹಿನ್ನೆಲೆಯಲ್ಲಿ ಜೆಡಿಎಸ್ ತನ್ನ ನೂತನ ಕಚೇರಿಯನ್ನು ನಗರದ ಹೆಣ್ಣೂರಿನಲ್ಲಿ ತೆರೆದಿದ್ದು, ನೂತನ ಹಾಗೂ ತಾತ್ಕಾಲಿಕ ಕಚೇರಿಗೆ ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡ ಅವರು ಭೇಟಿ ನೀಡಿ ಪರಿಶೀಲಿಸಿದರು. 
 
ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನೊಂದಿಗೆ ಪ್ರಾಣ ಕೊಡುವ ಜನರಿದ್ದಾರೆ. ಪಕ್ಷ ನಾಶವಾಗಲು ನಾನು ಬಿಡುವುದಿಲ್ಲ. ಪಕ್ಷದ ಸಂಘಟನೆ ನನ್ನ ಮೊದಲ ಆದ್ಯತೆ. ಬಳಿಕ ಜನತಾ ಪರಿವಾರವನ್ನು ಒಗ್ಗೂಡಿಸಲು ಯತ್ನಿಸುತ್ತೇನೆ ಎಂದರು. 
 
ಬಳಿಕ, ನಮ್ಮ ಪಕ್ಷದಲ್ಲಿದ್ದು, ಅಧಿಕಾರ ಅನುಭವಿಸಿದವರು ನಮ್ಮ ಸಹಾಯಕ್ಕೆ ಬರಲಿಲ್ಲ. ಆದರೆ ಅದಕ್ಕೆ ನಾನು ಬೇಸರಗೊಂಡಿಲ್ಲ. ಏಕೆಂದರೆ ನನ್ನೊಂದಿಗೆ ಸಾಕಷ್ಟು ಮಂದಿ ಯುವಕರಿದ್ದಾರೆ. ಅವರೊಂದಿಗೆ ನಾನು ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ತರುತ್ತೇನೆ ಎಂದು ಮಾರ್ಮಿಕವಾಗಿ ಸಿಎಂ ಸಿದ್ದರಾಮಯ್ಯನವರ ಬಗ್ಗೆ ಬೇಸರ ವ್ಯಕ್ತಪಡಿಸಿದರು.  
 
ಇದೇ ವೇಳೆ ಪಕ್ಷದ ಮೇಲೆ ನನಗೆ ವ್ಯಾಮೋಹವಿರಲಿಲ್ಲ. ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಾ. ಪರಮೇಶ್ವರ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಕಚೇರಿಯನ್ನು ಹಸ್ತಾಂತರಿಸಿದೆ. ಪ್ರಸ್ತುತ ಹೆಣ್ಣೂರಿನ ರಮೇಶ್ ಗೌಡ ಅವರ ಗೋಧಾಮಿನಲ್ಲಿ ತಾತ್ಕಾಲಿಕ ಕಚೇರಿಯನ್ನು ಪ್ರಾರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇತರೆಡೆಗೆ ವರ್ಗಾಯಿಸಲಾಗುವುದು ಎಂದರು. 

ವೆಬ್ದುನಿಯಾವನ್ನು ಓದಿ