ಡೆಂಗ್ಯೂ, ಚಿಕನ್ ಗುನ್ಯಾ ಬಳಿಕ ಬೆಂಗಳೂರಿಗರಿಗೆ ಜೀಕಾ ವೈರಸ್ ಭಯ

ಸೋಮವಾರ, 1 ಫೆಬ್ರವರಿ 2016 (14:15 IST)
ಡೆಂಗ್ಯೂ ಮತ್ತು ಚಿಕನ್ ಗುನ್ಯಾದಿಂದ ಬೆಂಗಳೂರಿನ ಜನತೆ ಕಂಗಾಲಾದ ಬಳಿಕ ಜಗತ್ತಿನಲ್ಲಿ ಭಯಭೀತಿ ಉಂಟುಮಾಡಿರುವ ಜೀಕಾ ವೈರಸ್ ಬೆಂಗಳೂರಿನ ಜನತೆಗೆ ಅಪಾಯ ಉಂಟುಮಾಡುವ ಸಂಭವವಿದೆ. ಈ ವೈರಸ್ ಸೋಂಕಿತ ಈಡೀಸ್ ಈಜಿಪ್ಟಿ ಸೊಳ್ಳೆಯ ಕಡಿತದಿಂದ ಹರಡುತ್ತದೆ. ಇದು ತಿಳಿನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತಿದ್ದು, ಸಾರ್ವಜನಿಕ ನೈರ್ಮಲ್ಯ ಕಳಪೆಯಾಗಿರುವ ಕಡೆ ವಿಪುಲವಾಗಿ ಹರಡುತ್ತವೆ.  ವಾಟ್ಸಾಪ್ ಗ್ರೂಪ್‌ನಲ್ಲಿ ಈ ಕಾಯಿಲೆಯ ಬಗ್ಗೆ ಬೆಂಗಳೂರಿನ ವೈದ್ಯರು ಮಾಹಿತಿ ನೀಡುತ್ತಿದ್ದು, ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ರಾಜ್ಯ ಆರೋಗ್ಯ ಇಲಾಖೆಯಿಂದ ಯಾವುದೇ ದೃಢ ಕ್ರಮ ಇದುವರೆಗೂ ಬಂದಿಲ್ಲ. 
 
ಈ ಕಾಯಿಲೆ ಹರಡದಂತೆ ತಡೆಯಲು ಯಾವುದೇ ಟೆಸ್ಟಿಂಗ್ ಸೌಲಭ್ಯವಿಲ್ಲ, ಏರ್‌ಪೋರ್ಟ್‌ಗಳಲ್ಲಿ ಯಾವುದೇ ಪರಿಶೀಲನೆ ವಿಧಾನಗಳಿಲ್ಲ ಮತ್ತು ಯಾವುದೇ ಮಾರ್ಗದರ್ಶಿ ಸೂತ್ರಗಳಿಲ್ಲ. ಅನೇಕ ಮಂದಿ ದಕ್ಷಿಣ ಅಮೆರಿಕ ಮತ್ತು ಇತರೆ ರಾಷ್ಟ್ರಗಳಿಗೆ ಪ್ರಯಾಣಿಸುವುದರಿಂದ ಬೆಂಗಳೂರು ಅಪಾಯದಲ್ಲಿ ಸಿಲುಕಬಹುದು. ಬೆಂಗಳೂರಿನ ಕಸದ ಸಮಸ್ಯೆ ಮತ್ತು  ವಿಪರೀತ ಸೊಳ್ಳೆಗಳು ಈ ರೋಗ ಹರಡುವುದಕ್ಕೆ ನೆರವಾಗುತ್ತದೆಂದು ಹೇಳಲಾಗುತ್ತಿದೆ. 
 
ಭಾರತ ಜೀಕಾ ವೈರಸ್‌ ಸೋಂಕಿಗೆ ಸುಲಭವಾಗಿ ತುತ್ತಾಗಬಹುದು ಎಂದು ಡಾ. ಸತೀಶ್ ಅಮರನಾಥ್ ಹೇಳಿದ್ದಾರೆ. ಅನೇಕ ಭಾರತೀಯರು ದಕ್ಷಿಣ ಅಮೆರಿಕಾಗೆ ಪ್ರಯಾಣಿಸುತ್ತಾರೆ. ನಮ್ಮಲ್ಲಿ ಜೀಕಾ ವೈರಸ್ ಪರೀಕ್ಷೆಗೆ, ಗುರುತಿಸಲು ಮತ್ತು ನಿಗಾ ವಹಿಸಲು ಯಾವುದೇ ಸೌಲಭ್ಯವಿಲ್ಲ . ಈ ಕುರಿತು ಟೆಸ್ಟಿಂಗ್ ಕಿಟ್‌ಗಳನ್ನು ಪೂರೈಸಬೇಕು ಎಂದು ಹೇಳಿದರು. 
 

ವೆಬ್ದುನಿಯಾವನ್ನು ಓದಿ