ಅಪಘಾತದಲ್ಲಿ ಜಡ್ಜ್ ನಿಧನ: ಸತ್ರ ನ್ಯಾಯಾಲಯಕ್ಕೆ ಬೀಗ

ಭಾನುವಾರ, 22 ಫೆಬ್ರವರಿ 2015 (16:02 IST)
ಮೈಸೂರಿನ ಒಂದೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನ್ಯಾಯಾಧೀಶರ ನೇಮಕಕ್ಕೆ ವಕೀಲ ಬಸವರಾಜ್ ಎಂಬವರು ಒತ್ತಾಯಿಸಿದ್ದಾರೆ.  ಇಲ್ಲಿನ ನ್ಯಾಯಾಧೀಶ ರುದ್ರಮನಿ ಎಂಬವರು ತಿರುಪತಿಯಲ್ಲಿ ಬಸ್ ಅಪಘಾತದಲ್ಲಿ ಮೃತಪಟ್ಟಿದ್ದರು.

ಅಂದಿನಿಂದ ಸತ್ರ ನ್ಯಾಯಾಲಯಕ್ಕೆ ಬೀಗ ಹಾಕಲಾಗಿದೆ ಎಂದು ವಕೀಲ ಬಸವರಾಜ್   ಆರೋಪಿಸಿದ್ದಾರೆ. .  9 ತಿಂಗಳ ಹಿಂದೆ ತಿರುಪತಿಗೆ ಪಾದಯಾತ್ರೆ ಕೈಗೊಂಡಿದ್ದಾಗ ನ್ಯಾಯಾಧೀಶರು ಬಸ್ ಡಿಕ್ಕಿ ಹೊಡೆದು ಮೃತಪಟ್ಟಿದ್ದರು.  ಆದರೆ ಅವರು ಮೃತಪಟ್ಟು 9 ತಿಂಗಳಾದರೂ ನ್ಯಾಯಾಧೀಶರ ನೇಮಕವಾಗದೇ ಕೋರ್ಟ್‌ ಹಾಲ್‌ಗೆ  ಬೀಗ ಜಡಿಯಲಾಗಿದೆ.

ರುದ್ರಮನಿ ಮೃತಪಟ್ಟ ನಂತರ ಕೊಠಡಿಯಲ್ಲಿ ದೆವ್ವ ಓಡಾಡುತ್ತಿದೆ ಎಂಬ ಪುಕಾರು ಹಬ್ಬಿದೆ. ಕೋರ್ಟ್ ಆವರಣದ ಪ್ರವೇಶ ದ್ವಾರದಲ್ಲೇ ಇರುವ ಈ ಕೋಣೆಯನ್ನು ಈಗ ಸ್ಟೋರ್‌ರೂಂಗೆ ಪರಿವರ್ತಿಸಲಾಗಿದ್ದು, ಮುರಿದ ಕುರ್ಚಿಗಳು ಮತ್ತು ಮೇಜುಗಳನ್ನು ಇರಿಸಲಾಗಿದೆ.  ಮೂಲಗಳ ಪ್ರಕಾರ ಈ ಹಾಲ್ ಗೆ ದೆವ್ವದ ಕೋಣೆಯೆಂದೇ ಕರೆಯಲಾಗುತ್ತಿದೆ. ವಿಚಿತ್ರವೆಂದರೆ ನ್ಯಾಯಾಧೀಶರು ನಿಧನರಾದ ನಂತರ ಕೋರ್ಟ್ ಅಧಿಕಾರಿಗಳು ಈ ಕೋಣೆಯ ಬಾಗಿಲನ್ನು ತೆರೆದೇ ಇಲ್ಲದಿರುವುದು ದೆವ್ವದ ಕೋಣೆ ಎಂಬ ವದಂತಿಗೆ ಪುಷ್ಠಿ ನೀಡಿದೆ.

ಜ್ಯೋತಿಷಿಯೊಬ್ಬರು ದುಷ್ಟ ಶಕ್ತಿಗಳ ನಿಗ್ರಹಕ್ಕೆ ವಿಶೇಷ ಪೂಜೆ ಮಾಡುವ ತನಕ ಕೋರ್ಟ್ ಹಾಲ್‌ಗೆ ಬೀಗ ಹಾಕಿಡಬೇಕೆಂದು ಸಲಹೆ ಮಾಡಿದ್ದರೆಂದು ಮೂಲವೊಂದು ಹೇಳಿದೆ.  ಈಗ ಸುಮಾರು 90 ವಕೀಲರು ಪತ್ರಿಕಾ ಪ್ರಕಟಣೆಯಲ್ಲಿ ಈ ವದಂತಿಗಳನ್ನು ಖಂಡಿಸಿ, ತನಿಖೆಗೆ ಆದೇಶಿಸಿದ್ದಾರೆ. ಮೃತಪಟ್ಟ ನ್ಯಾಯಾಧೀಶರು ಪ್ರಾಮಾಣಿಕ ವ್ಯಕ್ತಿಯಾಗಿದ್ದು, ಈ ರೀತಿ ವದಂತಿಗಳನ್ನು ಹಬ್ಬಿಸುವುದರಿಂದ ವಕೀಲರು ಮತ್ತು ನ್ಯಾಯಾಧೀಶರ ಸಮುದಾಯಕ್ಕೆ ಹಾನಿಯಾಗುತ್ತದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ