ರಾಜ್ಯ ಬಿಜೆಪಿ ಗೊಂದಲ: ವರಿಷ್ಠರ ಜತೆ ಚರ್ಚೆಗೆ ಈಶ್ವರಪ್ಪ ನಿರ್ಧಾರ

ಗುರುವಾರ, 30 ಜೂನ್ 2016 (12:51 IST)
ಪದಾಧಿಕಾರಿಗಳ ನೇಮಕ ಕುರಿತಂತೆ ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ಗೊಂದಲ ನಿವಾರಣೆಗಾಗಿ ವರಿಷ್ಠರ ಜೊತೆ ಚರ್ಚಿಸಲು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪದಾಧಿಕಾರಿಗಳ ನೇಮಕಾತಿಯಲ್ಲಿ ತಾರತಮ್ಯವೆಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಈಶ್ವರಪ್ಪ, ಸಮಯ ದೊರೆತ ಕೂಡಲೇ ದೆಹಲಿಗೆ ತೆರಳಿ ವರಿಷ್ಠರೊಂದಿಗೆ ಚರ್ಚಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ದೆಹಲಿಯಲ್ಲಿರುವ ವರಿಷ್ಠರು ಸಮಯ ನೀಡಿದ ಕೂಡಲೇ ದೆಹಲಿಗೆ ತೆರಳಿ ರಾಜ್ಯ ಬಿಜೆಪಿಯಲ್ಲಿ ಎದುರಾಗಿರುವ ಗೊಂದಲಗಳ ನಿವಾರಣೆಗೆ ಪ್ರಯತ್ನಿಸುತ್ತೇನೆ ಎಂದು ತಿಳಿಸಿದ್ದಾರೆ.
 
ಯಡಿಯೂರಪ್ಪ ಧೋರಣೆಯಿಂದ ನೊಂದಿರುವ ಕೆ.ಎಸ್.ಈಶ್ವರಪ್ಪ, ಪದಾಧಿಕಾರಿಗಳ ನೇಮಕಾತಿಯಲ್ಲಿ ತಮ್ಮನ್ನು ಕಡೆಗೆಣಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಪದಾಧಿಕಾರಿಗಳ ನೇಮಕ ಇನ್ನೂ ಗೊಂದಲದಲ್ಲಿರುವಂತೆಯೇ ಜಿಲ್ಲಾ ಪ್ರಭಾರಿಗಳ ನೇಮಕ ಮಾಡಿರುವ ಯಡಿಯೂರಪ್ಪ ಕ್ರಮ ಕೆಲ ಬಿಜೆಪಿ ನಾಯಕರಲ್ಲಿ ಅಸಮಾಧಾನ ಮೂಡಿಸಿದೆ ಎಂದು ಬಿಜೆಪಿ ಪಕ್ಷದ ಮೂಲಗಳು ತಿಳಿಸಿವೆ.
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ