ಸಭಾಧ್ಯಕ್ಷರಿಂದ ಆರೋಗ್ಯ ಸಚಿವ ಖಾದರ್‌ಗೆ ಚುರುಕು ಮಾತಿನ ಚಾಟಿ...!

ಗುರುವಾರ, 18 ಡಿಸೆಂಬರ್ 2014 (14:22 IST)
ಇಲ್ಲಿನ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಸಭಾ ಕಲಾಪದಲ್ಲಿ ಸರ್ಕಾರಿ ವೈದ್ಯರ ನೇಮಕಾತಿ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿದ್ದ ವೇಳೆ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಆರೋಗ್ಯ ಸಚಿವ ಯು.ಟಿ.ಖಾದರ್ ಅವರನ್ನು ಚರ್ಚೆಯುದ್ದಕ್ಕೂ ತರಾಟೆಗೆ ತೆಗೆದುಕೊಂಡ ಸನ್ನಿವೇಶ ಕಂಡು ಬಂತು.
 
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದ ಕಾರಣ ಸಾರ್ವಜನಿಕರು ಹಲವು ರೋಗಗಳಿಂದ ಮುಕ್ತರಾಗದೆ ನರಳುವ ಪರಿಸ್ಥಿತಿ ಬಂದಿದೆ. ಸರ್ಕಾರ ವೈದ್ಯರ ನೇಮಕಾತಿ ಬಗ್ಗೆ ಯಾವ ರೀತಿಯ ಕ್ರಮ ಕೈಗೊಂಡಿದೆ ಎಂದು ವಿರೋಧ ಪಕ್ಷಗಳ ಸದಸ್ಯರುಗಳು ಪ್ರಶ್ನಿಸಿದರು. ಈ ಪ್ರಶ್ನೆಗೆ ಉತ್ತರಿಸಿದ ಸಚಿವ ಖಾದರ್, ನೇಮಕಾತಿಗೆ ಸಂಬಂಧಿಸಿದಂತೆ ಈಗಾಗಲೇ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಪ್ಪಿಗೆ ಬಂದ ಕೂಡಲೆ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗುವುದು ಎಂದರು. 
 
ಇದಕ್ಕೆ ಉದ್ರಿಕ್ತಗೊಂಡ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ರೀ ಆರೋಗ್ಯ ಸಚಿವರೇ, ವರ್ಷವಿಡೀ ಹೇಳಿದ್ದನ್ನೇ ಹೇಳಬೇಡಿ, ಮೂರು ದಿನದ ಒಳಗೆ ಈ ಬಗ್ಗೆ ಕ್ರಮ ಕೈಗೊಂಡಿರಬೇಕು. ಇಲ್ಲವಾದಲ್ಲಿ ನೇರವಾಗಿ ನಾನೇ ಹಣಕಾಸು ಇಲಾಖೆಗೆ ಭೇಟಿ ನೀಡಿ ಪರಿಶೀಲಿಸಬೇಕಾಗುತ್ತದೆ ಎಚ್ಚರವಿರಲಿ ಎಂದು ಕುಟುಕಿದರು.  
 
ಇದೇ ವೇಳೆ, ಸಚಿವರು ಉತ್ತರಿಸುವಾಗ ಇತರೆ ಇಲಾಖೆಗಳ ಸಚಿವರಾದ ಮಹಾದೇವ ಪ್ರಸಾದ್, ಆರ್.ವಿ.ದೇಶಪಾಂಡೆ ಸೇರಿದಂತೆ ಇತರರು ದನಿಗೂಡಿಸಲು ಮುಂದಾದರು. ಇದನ್ನು ಕಂಡ ಸಭಾಧ್ಯಕ್ಷರು ಇತರೆ ಸಚಿವರ ಮೇಲೂ ಮಾತಿನ ಬಾಣ ಬಿಟ್ಟರು. ಬಳಿಕ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ ತರುವಾಯ ವಿಷಯದ ಚರ್ಚೆ ಅಂತ್ಯಗೊಂಡಿತು. 

ವೆಬ್ದುನಿಯಾವನ್ನು ಓದಿ