ಅಬ್ದುಲ್ ಕಲಾಂ ವಿಧಿವಶ: ರಾಮೇಶ್ವರಂನಲ್ಲಿ ನೀರವ ಮೌನ

ಮಂಗಳವಾರ, 28 ಜುಲೈ 2015 (17:29 IST)
ಖ್ಯಾತ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ನಿಧನ ಹಿನ್ನೆಲೆಯಲ್ಲಿ ಅವರ ಹುಟ್ಟೂರಾದ ತಮಿಳುನಾಡಿನ ರಾಮನಾಥಪುರಂನ ರಾಮೇಶ್ವರಂ ಗ್ರಾಮದಲ್ಲಿ ಪ್ರಸ್ತುತ ನೀರವ ಮೌನ ಆವರಿಸಿದೆ. 
 
ಪ್ರಸ್ತುತ ಕಲಾಂ ಮನೆ ಹಾಗೂ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಅವರ ನಿವಾಸದ ಹೊರ ಭಾಗದಲ್ಲಿ ಕಲಾಂ ಅವರ ಭಾವಚಿತ್ರವನ್ನಿಡಲಾಗಿದ್ದು, ಸಾರ್ವಜನಿಕರು ಪುಷ್ಪಾರ್ಚನೆ ಮಾಡುವ ಮೂಲಕ ನಮನ ಸಲ್ಲಿಸುತ್ತಿದ್ದಾರೆ. ಕಲಾಂ ನಿಧನ ಹಿನ್ನೆಲೆಯಲ್ಲಿ ಯಾವುದೇ ಭೇದ ಭಾವವಿಲ್ಲದೆ ಗ್ರಾಮದ ಎಲ್ಲಾ ಸಾರ್ವಜನಿಕರು ಮನೆಗೆ ಭೇಟಿ ನೀಡುತ್ತಿದ್ದು, ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.   
 
ಕಲಾಂ ಅವರ ಶರೀರವು ಗುರುವಾರ ಬೆಳಗ್ಗೆ ಗ್ರಾಮಕ್ಕೆ ತರಲಾಗುತ್ತಿದ್ದು, ಅಂದೇ ಅಂತ್ಯಕ್ರಿಯೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಂದ ಕುಮಾರ್ ನೇತೃತ್ವದಲ್ಲಿ ಈಗಾಗಲೇ ಮೂರು ಸ್ಥಳಗಳನ್ನು ಅಂತ್ಯಕ್ರಿಯೆಗಾಗಿ ಗುರುತಿಸಿಲಾಗಿದೆ. ರಾಮೇಶ್ವರಂ ರೈಲ್ವೆ ನಿಲ್ದಾಣ, ಕಾಚುವಳ್ಳಿ ಹಾಗೂ ನಟರಾಜಪುರಂ ಗುರುತಿಸಿದ ಸ್ಥಳಗಳಾಗಿವೆ. 
 
ಯಾವ ಸ್ಥಳದಲ್ಲಿ ಅಂತ್ಯಕ್ರಿಯೆ ಮಾಡಬೇಕು ಎಂಬ ಬಗ್ಗೆ ಕುಟುಂಬಸ್ಥರು ಹಾಗೂ ಪ್ರಮುಖ ಅಧಿಕಾರಿಗಳು ಇನ್ನೂ ಚರ್ಚೆ ನಡೆಸುತ್ತಿದ್ದು, ಜಿಲ್ಲಾಡಳಿತದಿಂದ ಶೀಘ್ರದಲ್ಲಿಯೇ ಅಂತಿಮ ತೀರ್ಮಾನ ಹೊರ ಬೀಳಲಿದೆ ಎಂದು ಹೇಳಲಾಗುತ್ತಿದೆ.  

ವೆಬ್ದುನಿಯಾವನ್ನು ಓದಿ