ಬೆಳ್ಳಿ ರಥದಲ್ಲಿ ಕಲಾಂ ಮೆರವಣಿಗೆ: ಶ್ರದ್ಧಾಂಜಲಿ

ಬುಧವಾರ, 29 ಜುಲೈ 2015 (17:03 IST)
ಮಾಜಿ ರಾಷ್ಟ್ರಪತಿ, ಖ್ಯಾತ ವಿಜ್ಞಾನಿ ಅಬ್ದುಲ್ ಕಲಾಂ ಅವರು ಜುಲೈ 27ರಂದು ಕೊನೆಯುಸಿರೆಳೆದಿದ್ದ ಹಿನ್ನೆಲೆಯಲ್ಲಿ ನಗರದಲ್ಲಿ ಇಂದು ರಾಜ್ಯದ ಕನ್ನಡ ಭಾಷಾ ಸಂಘಟನೆಗಳ ವತಿಯಿಂದ ಏರ್ಪಡಿಸಲಾಗಿದ್ದ ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡುವ ಮೂಲಕ ಶೃದ್ಧಾಂಜಲಿ ಸಲ್ಲಿಸಲಾಯಿತು.  
 
ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಈ ಮೆರವಣಿಗೆ ನಡೆದಿದ್ದು, ಬೆಳ್ಳಿರಥದಲ್ಲಿ ಬೃಹತ್ ಗಾತ್ರದ ಭಾವಚಿತ್ರವನ್ನಿಟ್ಟು ಮೆರವಣಿಗೆ ಮಾಡಲಾಯಿತು. ನಗರದ ಮೈಸೂರು ಬ್ಯಾಂಕ್ ರಸ್ತೆಯಿಂದ ಹೊರಟ ಈ ಮೆರವಣಿಗೆಗೆ ವಿವಿಧ ಕನ್ನಡಪರ ಸಂಘಟನೆಗಳು ಕೈ ಜೋಡಿಸಿ ಶ್ರದ್ಧಾಂಜಲಿ ಸಲ್ಲಿಸಿದವು.
 
ಇದೇ ವೇಳೆ ಮಾತನಾಡಿದ ವಾಟಾಳ್, ಕಲಾಂ ಅವರಿಗೆ ಮಕ್ಕಳು ಅಂದ್ರೆ ತುಂಬಾ ಪ್ರೀತಿ. ಆದ್ದರಿಂದಲೇ ಅವರು ಕೊನೆ ಗಳಿಗೆಯಲ್ಲಿಯೂ ಕೂಡ ವಿದ್ಯಾರ್ಥಿಗಳೊಂದಿಗೆ ಕಾಲ ಕಳೆದಿದ್ದಾರೆ. ಅಲ್ಲದೆ ನಾನು ಕೊನೆಯುಸಿರೆಳೆದಲ್ಲಿ ರಜೆ ಕೊಡಬೇಡಿ. ಒಂದು ದಿನ ಹೆಚ್ಚು ಕೆಲಸ ನಿರ್ವಹಿಸಿ ಎಂದು ಹೇಳಿದ್ದರು. ಅವರ ಆ ಮಾತು ರಾಷ್ಟ್ರದ ಪ್ರತಿಯೋರ್ವರಿಗೂ ಕೂಡ ಆದರ್ಶ ಎಂದರು. 
 
ಬಳಿಕ, ಆದರ್ಶ ರಾಷ್ಟ್ರಪತಿಯಾಗಿ ಕೆಲಸ ನಿರ್ವಹಿಸುವ ಮೂಲಕ ಪ್ರಜೆಗಳ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಕಲಾಂ ಅವರ ಪ್ರತಿಮೆಯನ್ನು ಕೇಂದ್ರ ಸರ್ಕಾರ ಸಂಸತ್ ಭವನದ ಮುಂಭಾಗದಲ್ಲಿ ಅನಾವರಣಗೊಳಿಸಬೇಕು ಎಂದು ಒತ್ತಾಯಿಸಿದರು.  

ವೆಬ್ದುನಿಯಾವನ್ನು ಓದಿ