ಸಾಹಿತಿ ಕಲಬುರ್ಗಿ ಹತ್ಯೆ ಪ್ರಕರಣ ಸಿಐಡಿಗೆ

ಸೋಮವಾರ, 31 ಆಗಸ್ಟ್ 2015 (12:20 IST)
ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ಖ್ಯಾತ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ (77ವರ್ಷ) ಅವರ ಹತ್ಯೆಯ ತನಿಖೆಯನ್ನು ಸರ್ಕಾರ ಸಿಐಡಿಗೆ ಒಪ್ಪಿಸಿದೆ.
 
ಬೆಂಗಳೂರಿನಲ್ಲಿ ಈ ಕುರಿತು ಪತ್ರಕರ್ತರ ಜತೆ ಮಾತನಾಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ 'ಕಲಬುರ್ಗಿ ಹತ್ಯೆ ಪ್ರಕರಣವನ್ನು ಸಿಐಡಿಗೆ ವಹಿಸುತ್ತೇನೆ. ಆರೋಪಿಗಳು ಯಾರೇ ಆದರೂ ಬಂಧಿಸುತ್ತೇವೆ', ಎಂದು ಭರವಸೆ ನೀಡಿದ್ದಾರೆ.

ಪ್ರಕರಣವನ್ನು ಸಿಐಡಿಗೆ ವಹಿಸುವಂತೆ ನಿನ್ನೆ ರಾಜ್ಯದ ವಿವಿಧೆಡೆ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಈ ಒತ್ತಾಯದ ಬೆನ್ನಲ್ಲೇ  ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿದೆ.  
 
ಭಾನುವಾರ ಬೆಳಗ್ಗೆ ಕಲಬುರ್ಗಿ ಅವರ ಧಾರವಾಡದ ನಿವಾಸಕ್ಕೆ ಬೈಕ್ ಮೇಲೆ ಬಂದಿದ್ದ ವ್ಯಕ್ತಿಗಳಿಬ್ಬರು ಬಾಗಿಲ ಹೊರಗೆ ನಿಂತು ತಾವು ವಿದ್ಯಾರ್ಥಿಗಳೆಂದು ಪರಿಚಯಿಸಿಕೊಂಡಿದ್ದಾರೆ. ಕಲಬುರ್ಗಿ ಅವರು ಬಾಗಿಲು ತೆರೆಯುತ್ತಿದ್ದಂತೆ ಹಣೆಗೆ ಪಿಸ್ತೂಲ್‍ನಿಂದ ಶೂಟ್ ಮಾಡಿ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
 
ಸಾಹಿತಿಯೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿರುವುದು ಇದೇ ಮೊದಲು. ಸಾಹಿತಿಯೊಬ್ಬರು ದುಷ್ಕರ್ಮಿಗಳಿಗೆ ಬಲಿಯಾದ ನಿದರ್ಶನಗಳು ಇಲ್ಲ. ಕಲಬುರ್ಗಿಯವರಿಗೆ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು. ಆದರೆ, ಅವರೇ ಅದನ್ನು ನಿರಾಕರಿಸಿದ್ದರು ಎನ್ನಲಾಗಿದೆ.
 
ಅವರ ಹತ್ಯೆಯನ್ನು ಖಂಡಿಸಿ ಇಂದು ಧಾರವಾಡ ಬಂದ್‌ಗೆ ಕರೆ ನೀಡಲಾಗಿದೆ. ಪ್ರತಿಭಟನಾಕಾರರು ಮಾನವ ಸರಪಳಿ ನಿರ್ಮಿಸಿ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ.
 
ಸದ್ಯ ಎಂ.ಎಂ.ಕಲಬುರ್ಗಿಯವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದ್ದು, ಕೆಲ ಹೊತ್ತಿನಲ್ಲಿ ಕರ್ನಾಟಕ ವಿವಿ ಆವರಣದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

ವೆಬ್ದುನಿಯಾವನ್ನು ಓದಿ