ಸಾಹಿತಿ ಕಲ್ಬುರ್ಗಿ ಹತ್ಯೆ ಪ್ರಕರಣ: ಶಂಕಿತ ಆರೋಪಿಯ ಬಂಧನ

ಗುರುವಾರ, 3 ಸೆಪ್ಟಂಬರ್ 2015 (15:46 IST)
ಸಾಹಿತಿ, ಹಿರಿಯ ಸಂಶೋಧಕ ಎಂ.ಎಂ.ಕಲ್ಬುರ್ಗಿ ಅವರ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಶಂಕಿತ ಆರೋಪಿಯನ್ನು ಮಂಗಳೂರಿನ ಸಿಸಿಬಿ ಪೊಲೀಸರು ಇಂದು ಬಂಧಿಸಿದ್ದಾರೆ. 
 
ಬಂಧಿತ ವ್ಯಕ್ತಿಯನ್ನು ಪ್ರಸಾದ್ ಅತ್ತಾವರ್(40) ಎಂದು ಹೇಳಲಾಗಿದ್ದು, ಈತ ಶ್ರೀರಾಮ ಸೇನೆಯ ಮಾಜಿ ರಾಜ್ಯ ಸಂಚಾಲಕನಾಗಿ ಕಾರ್ಯ ನಿರ್ವಹಿಸಿದ್ದಾನೆ ಎಂದು ಹೇಳಲಾಗಿದೆ. 
 
ಬಂಧಿತನ ಹಿನ್ನೆಲೆ: ಆರಂಭದಲ್ಲಿ ಶ್ರೀರಾಮ ಸೇನೆಯ ಕಾರ್ಯಕರ್ತನಾಗಿ ರಾಜ್ಯ ಸಂಚಾಲಕ ಹುದ್ದೆಯನ್ನೂ ಅನುಭವಿಸಿದ್ದ ಅತ್ತಾವರ್, ಬಳಿಕ ಸೇನೆ ತೊರೆದು ತಾನೇ ಸ್ವಯಂ ನಿರ್ಧಾರ ಕೈಗೊಂಡು ರಾಮ ಸೇನೆಯನ್ನು ಕಟ್ಟಿದ್ದ. ಈ ಸಂಘಟನೆಯನ್ನು ಮೂರು ವರ್ಷಗಳ ಕಾಲ ನಡೆಸಿ ಬಳಿಕ ಅದನ್ನೂ ಕೈ ಬಿಟ್ಟಿದ್ದ. ತರುವಾಯ ಭೂಗತ ಪಾತಕಿ ರವಿ ಪೂಜಾರಿಯೊಂದಿಗೆ ಸಂಪರ್ಕದಲ್ಲಿದ್ದಾನೆ ಎಂಬ ಆರೋಪದಡಿಯಲ್ಲಿ ಬಂಧಿಸಿದ್ದ ಪೊಲೀಸರು, ಆತನನ್ನು ಒಂದು ವರ್ಷ ಕಾಲ ಜೈಲಿನಲ್ಲಿಯೂ ಕೂಡ ಕಂಬಿ ಎಣಿಸುವಂತೆ ಮಾಡಿದ್ದರು. ಇದೆಲ್ಲದರಿಂದ ಪಾರಾಗಿ ಮತ್ತೆ ಹೊರ ಬಿಂದಿದ್ದ ಆರೋಪಿ 2009ರಲ್ಲಿ ನಡೆದ ಮಂಗಳೂರು ಪಬ್ ದಾಳಿಯಲ್ಲಿಯೂ ಕೂಡ ಕಾಣಿಸಿಕೊಂಡು ಬಂಧಿತನಾಗಿದ್ದ. ಅಲ್ಲದೆ ಪಬ್ ದಾಳಿಯ ಪ್ರಮುಖ ಆರೋಪಿ ಎಂದು ಹೇಲಲಾಗಿದೆ. 
 
ಇನ್ನು ಸಾಹಿತಿ ಕಲಬುರ್ಗಿ ಅವರು ಭಾನುವಾರ ಬೆಳಗ್ಗೆ 8.30ರ ಸುಮಾರಿನಲ್ಲಿ ತಮ್ಮ ನಿವಾಸದ ಹೊರಾಂಗಣದಲ್ಲಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿಗಳು ಎರಡು ಸುತ್ತು ಗುಂಡಿನ ದಾಳಿ ನಡೆಸಿದ್ದರು. ಪರಿಣಾಮ ಗುಂಡು ಹಣೆ ಹಾಗೂ ಎದೆಗೆ ತಗುಲಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಬಳಿಕ ಸರ್ಕಾರವು ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ