ಅ.10ಕ್ಕೆ ಕಣಕುಂಬಿಯ ತಡೆಗೋಡೆ ಮಟ್ಯಾಶ್: ರೈತರ ಒಕ್ಕೊರಲ ನಿರ್ಧಾರ

ಶನಿವಾರ, 3 ಅಕ್ಟೋಬರ್ 2015 (12:59 IST)
ಕಳಸಾ-ಬಂಡೂರಿ ಯೋಜನೆ ಜಾರಿಗಾಗಿ ನಡೆಸುತ್ತಿರುವ ಸಾಕಷ್ಟು ವರ್ಷಗಳ ಹೋರಾಟಕ್ಕೆ ನ್ಯಾಯಾ ದೊರೆಯದ ಹಿನ್ನೆಲೆಯಲ್ಲಿ ಜಾತ್ಯಾತೀತ ರೈತ ಹೋರಾಟ ಸಮಿತಿಯು ಪ್ರಮುಖ ನಿರ್ಧಾರವೊಂದನ್ನು ಕೈಗೊಂಡಿದ್ದು, ಅ.10ರಂದು ಕಳಸಾ ಉಪ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ತಡೆಗೊಡೆಯನ್ನು ಉರುಳಿಸುವ ನಿರ್ಧಾರ ಪ್ರಕಟಿಸಿದೆ. 
 
ಧಾರವಾಡ ಜಿಲ್ಲೆಯ ನವಲಗುಂದ ಮೂಲದ ಈ ಸಮಿತಿಯು ಇಂದು ತನ್ನ ಈ ನಿರ್ಧಾರವನ್ನು ಪ್ರಕಟಿಸಿದ್ದು, ಕಳದ ಮೂರ್ನಾಲ್ಕು ದಶಕಗಳಿಂದಲೂ ಕೂಡ ಕಳಸಾ-ಬಂಡೂರಿ ಜಾರಿಗಾಗಿ ಆಗ್ರಹಿಸುತ್ತಿದ್ದೇವೆ. ಆದರೆ ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಕೂಡ ಮನ್ನಣೆ ನೀಡದೆ ರೈತರನ್ನು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡುತ್ತಿವೆ. ಕಾನೂನಿಗೆ ತಲೆ ಬಾಗಿ ಮುಂದುವರಿದರೂ ಕೂಡ ನ್ಯಾಯ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಂತಿಮವಾಗಿ ತಡೆಗೋಡೆ ಒಡೆಯಲು ನಿರ್ಧರಿಸಿದ್ದು, ಅ.10ರಂದು ತಡೆಗೋಡೆಯನ್ನು ಹೊಡೆದೇ ತಿರುತ್ತೇವೆ ಎಂಬ ನಿರ್ಧಾರ ಪ್ರಕಟಿಸಿದೆ. ಸಮಿತಿಯ ಈ ನಿರ್ಧಾರಕ್ಕೆ ರಾಜ್ಯದ ಎಲ್ಲಾ ರೈತ ಸಂಘಗಳು ಹಾಗೂ ಕನ್ನಡಪರ ಸಂಘಟನೆಗಳೂ ಕೈ ಜೋಡಿಸಲಿವೆ ಎಂಬುದಾಗಿ ಸಮಿತಿ ದೃಢಪಡಿಸಿದೆ. ಈ ತಡೆಗೋಡೆನ್ನು ಬೆಳಗಾವಿ ಜಿಲ್ಲೆಯ ಖಾನಪುರ ತಾಲೂಕಿನ ಕಣಕುಂಬಿ ಎಂಬ ಗ್ರಾಮದ ಬಳಿ ಕಳಸಾ ಉಪನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. 
 
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಸೆ.26ರಂದು ಕರೆಯಲಾಗಿದ್ದ ಕರ್ನಾಟಕ ಬಂದ್ ವೇಳೆಯಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಪ್ರತಿಕ್ರಿಯಿಸಿ, ಮನೆಗೊಂದು ಗುದ್ದಲಿ ತನ್ನಿ ತಡೆಗೋಡೆಯನ್ನು ಹೊಡೆದು ಹಾಕೋಣ. ಈ ವೇಳೆ ನಮ್ಮನ್ನು ಜೈಲಿಗೆ ಹಾಕಿದಲ್ಲಿ ಜೈಲಿಗೂ ತೆರಳೋಣ ಎಂದು ಕರೆ ನೀಡಿದ್ದರು. ವಾಟಾಳ್ ಅವರ ಈ ಹೇಳಿಕೆಯೇ ಸಮಿತಿಗೆ ಪುಷ್ಠಿ ನೀಡಿರಬಹುದು ಎಂದು ಹೇಳಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ