ಸಿಎಂ ದುಬಾರಿ ವಾಚ್: ತನಿಖೆಗೆ ಆಗ್ರಹಿಸಿ ಗಾಂಧಿ ಪ್ರತಿಮೆ ಎದುರು ಧರಣಿ

ಶುಕ್ರವಾರ, 4 ಮಾರ್ಚ್ 2016 (12:18 IST)
ಸಿಎಂ ದುಬಾರಿ ವಾಚ್ ಪ್ರಕರಣ ವಿಧಾನ ಸೌಧದಲ್ಲಿ ಸ್ವಲ್ಪ ಮಟ್ಟಿಗೆ ತಣ್ಣಗಾದರೂ ದೆಹಲಿಯಲ್ಲಿ ಮಾರ್ದನಿಸುತ್ತಿದೆ. 

ದುಬಾರಿ ವಾಚ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಅಥವಾ ಸಿಬಿಐ ತನಿಖೆ ನಡೆಸಬೇಕೆಂದು ಆಗ್ರಹಿಸಿ ರಾಜ್ಯ ಬಿಜೆಪಿ ಸಂಸದರು  ಗಾಂಧಿ ಪ್ರತಿಮೆ ಎದುರು ಪ್ರತಿಭಟನೆಯನ್ನು ಕೈಗೊಂಡಿದ್ದಾರೆ. 
 
ತನಿಖೆಯನ್ನು ಕೈಗೊಂಡು ವಾಚ್ ರಹಸ್ಯವನ್ನು ಬಹಿರಂಗ ಪಡಿಸಬೇಕು ಎಂದು ಸಂಸದರು ಒತ್ತಾಯಿಸಿದ್ದಾರೆ. 
 
ಹಾಡುವುದು ಸಮಾಜವಾದ ಮಾಡುವುದು ಮಜಾವಾದ, ವಾಚ್ ಹಗರಣ ಮುಚ್ಚಿ ಹಾಕಲು ರೈತರ ನೆತ್ತರು ಹರಿಸಿದ ಸರ್ಕಾರಕ್ಕೆ ಧಿಕ್ಕಾರ, ವಾಚ್ ಹಗರಣ ಸಿಬಿಐಗೆ ಒಪ್ಪಿಸಿ - ಹೀಗೆ ಬರೆದಿದ್ದ ಫಲಕಗಳನ್ನು ಹಿಡಿದುಕೊಂಡು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಸುರೇಶ್ ಅಂಗಡಿ, ನಳಿನ್ ಕುಮಾರ್ ಕಟೀಲು ಗಾಂಧಿ ಪ್ರತಿಮೆ ಎದುರು ಪ್ರತಿಭಟನೆಯನ್ನು ಕೈಗೊಂಡಿದ್ದಾರೆ. 
 
ವಿಧಾನಮಂಡಲದ ಉಭಯ ಸದನಗಳ ಎರಡು ದಿನದ ಕಲಾಪವನ್ನು ಬಲಿ ತೆಗೆದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುಬಾರಿ ವಾಚ್‌ ಪ್ರಕರಣದ ಬಗ್ಗೆ ಚರ್ಚೆ ಹಾಗೂ ತನಿಖೆಗೆ ಒತ್ತಾಯಿಸಿ ಧರಣಿ ನಡೆಸುತ್ತಿದ್ದ ಪ್ರತಿಪಕ್ಷಗಳು ಗುರವಾರ ಧರಣಿ ಹಿಂಪಡೆಯುವ ಮೂಲಕ ವಾಚ್‌ ಪ್ರಹಸನಕ್ಕೆ ವಿಧಾನಸಭೆಯಸಲ್ಲಿ ತಾತ್ಕಾಲಿಕ ಅಂತ್ಯ ಹಾಡಿದ್ದರು. 

ವೆಬ್ದುನಿಯಾವನ್ನು ಓದಿ