70 ಲಕ್ಷದ ವಾಚ್‌ನ್ನು ಆಸ್ತಿಯಾಗಿ ಘೋಷಿಸಲಿದ್ದಾರೆ ಸಿಎಂ

ಮಂಗಳವಾರ, 23 ಫೆಬ್ರವರಿ 2016 (15:43 IST)
ಭಾರಿ ವಿವಾದಕ್ಕೆ ಕಾರಣವಾಗಿರುವ ದುಬಾರಿ ಡೈಮಂಡ್ ವಾಚಿನ ವಿವರವನ್ನು ತೆರಿಗೆ ಇಲಾಖೆ ಮತ್ತು  ಲೋಕಾಯುಕ್ತದ ಮುಂದೆ ಆಸ್ತಿಯಾಗಿ ಘೋಷಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಈ ಮೂಲಕ ತಮ್ಮ ನಿದ್ದೆಗೆಡಿಸಿರುವ ವಾಚ್ ವಿವಾದಕ್ಕೆ ಸಿಎಂ ತೆರೆ ಎಳೆಯಲಿದ್ದಾರೆ. 
 
ಎಲ್ಲಾ ಶಾಸಕರು ಪ್ರತಿ ವರ್ಷ ಮಾರ್ಚ್ 31ರ ಒಳಗೆ ತಮ್ಮ ಆಸ್ತಿವಿವರವನ್ನು ಮತ್ತು ಲೋಕಾಯುಕ್ತ ಇಲಾಖೆಗೆ ಒಪ್ಪಿಸಬೇಕು. ಹಲವು ದಿನಗಳಿಂದ ವಿವಾದಕ್ಕೆ ಕಾರಣವಾಗಿರುವ ತಮ್ಮ ವಜ್ರಖಚಿತ ದುಬಾರಿ ಕೈಗಡಿಯಾರದ ಮಾಹಿತಿಯನ್ನು ಸಿದ್ದರಾಮಯ್ಯ ಈ ಬಾರಿ ಲೋಕಾಯುಕ್ತಕ್ಕೆ ಸಲ್ಲಿಸಲಿರುವ ಆಸ್ತಿ ವಿವರ ಪ್ರಮಾಣ ಪತ್ರದಲ್ಲಿ ನಮೂದಿಸಲಿದ್ದಾರೆ ಎಂದು ತಿಳಿದು ಬಂದಿದೆ. 
 
ರಾಜ್ಯಾದ್ಯಂತ ಕುತೂಹಲಕ್ಕೆ ಕಾರಣವಾಗಿರುವ 70 ಲಕ್ಷ ರೂ. ಮೌಲ್ಯದ ಹೂಬ್ಲೊಟ್ ಕೈಗಡಿಯಾರದ ಬಗ್ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ದಿನಕ್ಕೊಂದು ಮಾಹಿತಿ ಬಹಿರಂಗ ಪಡಿಸುತ್ತಿರುವುದು ಸಿದ್ದರಾಮಯ್ಯ ನಿದ್ದೆಗೆಡಿಸಿ ಬಿಟ್ಟಿತ್ತು.  ನಿಯಮದ ಪ್ರಕಾರ, ಯಾವುದೇ ಮೌಲ್ಯಯುತ ವಸ್ತುವನ್ನು ಸ್ವತಃ ಖರೀದಿಸಿದ್ದರೂ, ಇಲ್ಲವೇ ಉಡುಗೊರೆ ರೂಪದಲ್ಲಿ ಪಡೆದಿದ್ದರೂ ಆಸ್ತಿ ವಿವರದಲ್ಲಿ ನಮೂದಿಸಬೇಕು. ಆದರೆ ಸಿದ್ದರಾಮಯ್ಯನವರು ಕಳೆದ ವರ್ಷ ತಾವು ಲೋಕಾಯುಕ್ತಕ್ಕೆ ಸಲ್ಲಿಸಿದ್ದ ಆಸ್ತಿವಿವರದಲ್ಲಿ ವಾಚ್ ಬಗ್ಗೆ ನಮೂದಿಸಿರಲಿಲ್ಲ. 
 
ಮೂಲಗಳ ಪ್ರಕಾರ ಈ ಹುಬ್ಲೋಟ್ ಕಂಪನಿಯ ಈ ದುಬಾರಿ ವಾಚ್‌ನ್ನು ವೈದ್ಯರೊಬ್ಬರು ಮುಖ್ಯಮಂತ್ರಿಗಳಿಗೆ ಉಡುಗೊರೆಯಾಗಿ ನೀಡಿದ್ದಾರೆ. 
 
ವರದಿಗಳ ಪ್ರಕಾರ ಕಳೆದ ಎರಡು ವರ್ಷಗಳಿಂದ ಸಿಎಂ ಈ ವಾಚ್‌ನ್ನು ಹೊಂದಿದ್ದಾರೆ. ಆದರೆ ಈಗ ಅದನ್ನು ಆಸ್ತಿ ವಿವರವಾಗಿ ಘೋಷಿಸಲು ಮುಂದಾಗಿದ್ದಾರೆ. ಆ ವಾಚ್‌ನ ಮಾರಾಟದ ವಿವರವನ್ನು ಸಹ ಅವರು ಪಡೆದುಕೊಂಡಿದ್ದಾರೆ.  
 
ಸಿಎಂ  ದುಬಾರಿ ವಾಚ್ ವಿವಾದವನ್ನು ಸಂಸತ್ತಿನಲ್ಲಿ ಮತ್ತು ವಿಧಾನಸಭಾ ಕಲಾಪದಲ್ಲಿ ಎತ್ತಲು ಬಿಜೆಪಿ ಕಾದು ಕುಳಿತಿದೆ. ಸಿಎಂ ವಾಚ್‌ ಡಾಕ್ಯುಮೆಂಟ್‌ಗಳನ್ನು ಬಹಿರಂಗ ಪಡಿಸುತ್ತೇನೆ ಎಂದು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ  ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದು ಎಲ್ಲರ ಕುತೂಹಲ ಕೆರಳಿಸಿದೆ. 

ವೆಬ್ದುನಿಯಾವನ್ನು ಓದಿ