ರಾಜ್ಯದಲ್ಲಿ ಭೀಕರ ಬರಗಾಲ, ಅನುದಾನಕ್ಕೆ ಮೊರೆ

ಗುರುವಾರ, 22 ಡಿಸೆಂಬರ್ 2016 (11:10 IST)
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ರಾಜ್ಯದಲ್ಲಿ ಈ ವರ್ಷ ಭೀಕರ ಬರ ಪರಿಸ್ಥಿತಿ ತಲೆದೋರಿದೆ, ಇನ್ನೊಂದೆಡೆ ಅನಾವೃಷ್ಟಿ ಸಂಭವಿಸಿದೆ ಎಂದರು.
 
ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ ಬರ ಪರಿಹಾರಕ್ಕಾಗಿ 4702 ಕೋಟಿ ರೂ. ಹಾಗೂ ಅನಾವೃಷ್ಟಿಯ ಪರಿಹಾರಕ್ಕಾಗಿ 376 ಕೋಟಿ ರೂ. ಗಳ ಅನುದಾನವನ್ನು ರಾಜ್ಯಕ್ಕೆ ಶೀಘ್ರ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಈಗಾಗಲೆ ಮನವಿ ಸಲ್ಲಿಸಲಾಗಿದ್ದು, ಅನುದಾನ ಬಿಡುಗಡೆಯ ನಿರೀಕ್ಷೆಯಲ್ಲಿದ್ದೇವೆ ಎಂದು ಮುಖ್ಯಮಂತ್ರಿಯವರು ಹೇಳಿದರು.
 
ದೆಹಲಿಗೆ ತೆರಳಿ, ಕೇಂದ್ರ ಗೃಹ ಸಚಿವರಾದ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಮನವಿಯನ್ನು ಮಾಡಿದ್ದೇವೆ. ಲೋಕಸಭೆ ಅಧಿವೇಶನ ನಂತರ ಈ ಕುರಿತು ಸಭೆ ಕೈಗೊಂಡು ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೇಂದ್ರ ಗೃಹ ಸಚಿವರು ತಿಳಿಸಿದ್ದಾರೆ. 
 
ಆದರೆ ಇದುವರೆಗೂ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆ ಕುರಿತು ಯಾವುದೇ ಕ್ರಮ ಆಗಿಲ್ಲ ಎಂದು ನುಡಿದ ಮುಖ್ಯಮಂತ್ರಿಯವರು, ಈ ಹಿನ್ನೆಲೆಯಲ್ಲಿ ರಾಜ್ಯ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪನವರು ಹಾಗೂ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವರು ಹಾಗೂ ಕೇಂದ್ರ ಹಣಕಾಸು ಸಚಿವರನ್ನು ಭೇಟಿ ಮಾಡಿ ಮತ್ತೊಮ್ಮೆ ಮನವಿ ಸಲ್ಲಿಸಲಿದ್ದಾರೆ ಎಂದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ