ರಾಹುಲ್ ಭೇಟಿಯಲ್ಲಿ ಗೈರು: 15 ಸಚಿವರನ್ನು ಕೈಬಿಡಲು ಹೈಕಮಾಂಡ್ ಚಿಂತನೆ

ಮಂಗಳವಾರ, 13 ಅಕ್ಟೋಬರ್ 2015 (15:49 IST)
ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾವೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗೈರುಹಾಜರಾಗಿದ್ದ 15 ಮಂದಿ ಸಚಿವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಎಐಸಿಸಿ ಆದೇಶ ನೀಡಿದ ಹಿನ್ನೆಲೆಯಲ್ಲಿ ಇಕ್ಕಟ್ಟಿಗೆ ಸಿಲುಕಿದ್ದಾರೆ.
 
ರಾಹುಲ್ ಗಾಂಧಿಯವರು ರಾಜ್ಯಕ್ಕೆ ಭೇಟಿ ನೀಡಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ  ಎಲ್ಲಾ ಸಚಿವರು ಹಾಜರಿರಬೇಕು ಎಂದು ಕೆಪಿಸಿಸಿ ಕಟ್ಟುನಿಟ್ಟಿನ ಆದೇಶ ಹೊರಡಿಸಿತ್ತು. ಆದಾಗ್ಯೂ ಹಿರಿಯ ಸಚಿವರಾದ ಶ್ಯಾಮನೂರ್ ಶಿವಶಂಕರಪ್ಪ, ವಸತಿ ಸಚಿವ ಅಂಬರೀಷ್, ಜವಳಿ ಖಾತೆ ಸಚಿವ ಬಾಬುರಾವ್ ಚಿಂಚನಸೂರ್ ಸೇರಿದಂತೆ ಒಟ್ಟು 15 ಸಚಿವರು ಗೈರುಹಾಜರಾಗಿದ್ದರು.
 
15 ಸಚಿವರ ಗೈರುಹಾಜರಿ ರಾಹುಲ್ ಗಾಂಧಿಯವರಿಗೆ ತೋರಿದ ಅಗೌರವವಾಗಿರುವ ಸ್ಪಷ್ಟ ಸಂಕೇತವಾಗಿದ್ದು, ಗೈರುಹಾಜರಾದ ಸಚಿವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸುವಂತೆ ರಾಜ್ಯದ ಉಸ್ತುವಾರಿ ಹೊತ್ತಿರುವ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್, ಕೆಪಿಸಿಸಿಗೆ ಆದೇಶ ನೀಡಿದ್ದರು ಎನ್ನಲಾಗಿದೆ.
 
ರಾಹುಲ್ ಭೇಟಿಯ ಸಂದರ್ಭದಲ್ಲಿ ಗೈರುಹಾಜರಾದ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಉತ್ತಮ ಸಂಬಂಧವಿಲ್ಲದಿರುವುದೇ ಮೂಲಕಾರಣ ಎನ್ನಲಾಗಿದೆ. ಶಿವಶಂಕರಪ್ಪ ಮತ್ತು ಅಂಬರೀಷ್‌‍ ಸಿಎಂ ಸಿದ್ದರಾಮಯ್ಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
 
ಮುಂದಿನ ತಿಂಗಳು ಸಚಿವ ಸಂಪುಟ ವಿಸ್ತರಣೆ ನಡೆಯುವ ಸಂದರ್ಭದಲ್ಲಿ 15 ಸಚಿವರನ್ನು ಕೈಬಿಡುವ ಬಗ್ಗೆಯೂ ಹೈಕಮಾಂಡ್ ಚಿಂತನೆ ನಡೆಸಿದೆ ಎಂದು ಅನಾಮಧೇಯರಾಗಿರಲು ಬಯಸಿದ ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ