ಮಾಧ್ಯಮಗಳ ಹಕ್ಕು ಕಸಿದ ಸರಕಾರ: ಟಿವಿ9 ಪ್ರಸಾರ ಸ್ಥಗಿತ

ಮಂಗಳವಾರ, 25 ನವೆಂಬರ್ 2014 (09:17 IST)
ಸರ್ಕಾರದ ವಿರುದ್ಧ ವರದಿಗಳನ್ನು ಪ್ರಸಾರ ಮಾಡುತ್ತಿದೆ ಎಂದು ಆರೋಪಿಸಿ ಟಿವಿ9 ಪ್ರಸಾರ ಮಾಡದಂತೆ  ಕೇಬಲ್ ಆಪರೇಟರ್‌ಗಳಿಗೆ ಕರ್ನಾಟಕ ಸರ್ಕಾರ ಸೂಚನೆ ನೀಡಿದ್ದು, ಬೆಂಗಳೂರು ಸೇರಿದಂತೆ  ರಾಜ್ಯದ ಹಲವೆಡೆ ನಿನ್ನೆ ಸಂಜೆಯಿಂದಲೇ ಟಿವಿ9 ಪ್ರಸಾರವನ್ನು ಸ್ಥಗಿತಗೊಳಿಸಲಾಗಿದೆ. ಈ ಮೂಲಕ ಸರ್ಕಾರ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾದ ಪತ್ರಿಕೋದ್ಯಮದ ಕತ್ತು ಹಿಸುಕುವ ಸಂವಿಧಾನ ಬಾಹಿರ ಕೆಲಸ ಮಾಡಿದೆ.

3 ದಿನಗಳ ಹಿಂದೆ ರಾಜ್ಯ ಕೇಬಲ್ ಆಪರೇಟರ್ ಪದಾಧಿಕಾರಿಗಳ ಸಭೆ ಕರೆದಿದ್ದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಟಿವಿ9 ಪ್ರಸಾರ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ್ದಾರೆ. ಇಲ್ಲವಾದಲ್ಲಿ ವಿದ್ಯುತ್ ಕಂಬಗಳ ಮೂಲಕ ಕೇಬಲ್‌ಗಳು ಹಾದುಹೋಗಿರುವುದರಿಂದ ಹೆಚ್ಚಿನ ಶುಲ್ಕ ಭರಿಸಲು ಸಿದ್ಧರಾಗಿ ಎಂಬ ಧಮ್ಕಿ ಕೂಡ ನೀಡಿದ್ದಾರೆ. ಹಾಗಾಗಿ ಸೋಮವಾರ ಸಂಜೆಯಿಂದಲೇ ಬೆಂಗಳೂರಿನಲ್ಲಿ ಟಿವಿ9 ಪ್ರಸಾರವನ್ನು ನಿಲ್ಲಿಸಲಾಗಿದೆ.
 
ಡಿಕೆಶಿ ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ಕೇಬಲ್ ಆಪರೇಟರ್ ಅಸೋಸಿಯೇಶನ್ ಸಂಘದ ಅಧ್ಯಕ್ಷ ಪ್ಯಾಟ್ರಿಕ್ ರಾಜು ರಾಜ್ಯದ ಕೇಬಲ್ ಆಪರೇಟರ್‌ಗಳಿಗೆ ಸಂದೇಶ ರವಾನಿಸಿದ್ದಾರೆ. "ಆತ್ಮೀಯ ಕೇಬಲ್ ಆಪರೇಟರ್‌ಗಳೇ ತುಂಬಾ ದಿನಗಳಿಂದ ಟಿವಿ9  ನಮ್ಮ  ಉದ್ಯಮದ ಹಿತಾಶಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ. ಈ ವಾಹಿನಿಯು ಅನವಶ್ಯಕವಾಗಿ ಸರ್ಕಾರದ ವಿರುದ್ಧ ವರದಿಗಳನ್ನು ಮಾಡುವ ಮೂಲಕ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದೆ. ಇದರ ನೇರ ಪರಿಣಾಮ ನಮ್ಮ ಉದ್ಯಮದ ಮೇಲಾಗುತ್ತಿದ್ದು, ನಾವು ಸರಕಾರವನ್ನು ಎದುರಿಸುವ ಪರಿಸ್ಥಿತಿ ಉಂಟಾಗಿದೆ. ನಿಮಗೆಲ್ಲಾ ತಿಳಿದಿರುವಂತೆ ನಾವು ಆಪ್ಟಿಕಲ್ ಕೇಬಲ್ ಅಳವಡಿಸಲು ಸ್ಥಳಾವಕಾಶ ಮಾಡಿಕೊಡುವಂತೆ, ಹೆಚ್ಚಿನ ಶುಲ್ಕವನ್ನೂ ವಿಧಿಸದಂತೆ  ಸರ್ಕಾರಕ್ಕೆ ಮನವಿ ಮಾಡಿಕೊಂಡಿರುತ್ತೇವೆ. ಸರ್ಕಾರವು ಕೂಡ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ಡಿಜಿಟೈಸೇಶನ್ ಪರಿಣಾಮವನ್ನು ಎದುರಿಸುತ್ತಿರುವ ನಾವೀಗ ಇತರೆ ವೆಚ್ಚವನ್ನು ಭರಿಸುವ ಪರಿಸ್ಥಿತಿಯಲ್ಲಿ ಇಲ್ಲ. ಹಾಗಾಗಿ ಸರ್ಕಾರದ ವಿರುದ್ಧ  ಏನನ್ನೂ ಪ್ರಸಾರ ಮಾಡಬೇಡಿ ಎಂದು ನಮ್ಮ ಪ್ರತಿನಿಧಿಗಳು ಟಿವಿ9ನ್ನು ಕೋರುತ್ತಲೇ ಬಂದಿದ್ದಾರೆ. ಆದರೆ ಟಿವಿ9 ನಿಂದ ನಮಗೆ ಸಕಾರಾತ್ಮಕ ಸ್ಪಂದನೆ ಬಂದಿಲ್ಲ. ಆದ್ದರಿಂದ ನಾವುಗಳು (ಕರ್ನಾಟಕ ರಾಜ್ಯ ಕೇಬಲ್ ಆಪರೇಟರ್ ಅಸೋಸಿಯೇಶನ್) ಇಂದು ಸಂಜೆ 6 ಗಂಟೆಯಿಂದಲೇ ಟಿವಿ9 ಮತ್ತು ನ್ಯೂಸ್ 9 ಪ್ರಸಾರ ಮಾಡದಂತೆ ಸೂಚನೆ ನೀಡುತ್ತೇವೆ" ಎಂದು ಅವರು ಪತ್ರ ಬರೆದಿದ್ದಾರೆ.
 
ರಾಜ್ಯದ ಎಲ್ಲಾ ಕೇಬಲ್ ಆಪರೇಟರ್‌ಗಳಿಗೆ ಈ ಪತ್ರ ರವಾನೆಯಾಗಿದೆ.
 
ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಈಗಾಗಲೇ ಟಿವಿ9 ಪ್ರಸಾರ ಸ್ಥಗಿತಗೊಳಿಸಲಾಗಿದ್ದು, ಸರ್ಕಾರದ ಈ ಕ್ರಮಕ್ಕೆ ರಾಜ್ಯಾದ್ಯಂತ ತೀವೃ ವಿರೋಧ ವ್ಯಕ್ತವಾಗುತ್ತಿದೆ. 

ವೆಬ್ದುನಿಯಾವನ್ನು ಓದಿ