ಸಿವಿಲ್ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಕಾರ್ತಿಕ್ ಅರ್ಜಿ

ಶನಿವಾರ, 30 ಆಗಸ್ಟ್ 2014 (12:04 IST)
ನಟಿ ಮೈತ್ರಿಯಾ ಮತ್ತು ಡಿವಿಎಸ್ ಪುತ್ರ ಕಾರ್ತಿಕ್ ಗೌಡ ಅವರ  ನಡುವಿನ ವಿವಾಹ ದಿನೇ ದಿನೇ ವಿವಾದದ ಸ್ವರೂಪ ಪಡೆಯುತ್ತಿದ್ದು , ಮೈತ್ರಿ ಮತ್ತು ಕಾರ್ತಿಕ್  ಪರಿಚಯವಾದಾಗಿನಿಂದ ವಿವಾಹವಾಗಿರುವ ತನಕ ನಡೆದ ಘಟನೆಗಳ ವಿವರವನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಪೊಲೀಸರು ಇಂದು ಬರೋಬ್ಬರಿ 12 ಗಂಟೆಗಳವರೆಗೆ ಮೈತ್ರಿಯಾ ಅವರ ವಿಚಾರಣೆಯನ್ನು ಪೊಲೀಸರು ನಡೆಸಿದ್ದು ಎಲ್ಲಾ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

ಈ ನಡುವೆ ಆರ್.ಟಿ. ನಗರ ಪೊಲೀಸರು ಕಾರ್ತಿಕ್ ಗೌಡ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಆದರೆ ಕಾರ್ತಿಕ್ ಗೌಡ ಇದುವರೆಗೆ ನೋಟಿಸ್‌ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲವೆಂದು ಹೇಳಲಾಗಿದೆ.  ಏತನ್ಮಧ್ಯೆ ಕಾರ್ತಿಕ್ ಗೌಡ ನಿರೀಕ್ಷಣಾ ಜಾಮೀನು ಕೋರಿ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.  ತಮ್ಮನ್ನು ಪೊಲೀಸರು ಬಂಧಿಸುವ ಸಾಧ್ಯತೆಯಿರುವುದರಿಂದ ಕಾರ್ತಿಕ್ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಈ ಪ್ರಕರಣದಲ್ಲಿ ತಾವು ಅಮಾಯಕರಾಗಿದ್ದು, ಮೈತ್ರಿಯಾ ದೂರು ವೈರುದ್ಧ್ಯದಿಂದ ಕೂಡಿದೆ ಎಂದು ಕಾರ್ತಿಕ್ ಅರ್ಜಿಯಲ್ಲಿ ತಿಳಿಸಿದ್ದಾರೆ.  ಕಾರ್ತಿಕ್ ವಿರುದ್ಧ ಮೈತ್ರಿಯಾ  ಅಪಹರಣ ಮತ್ತು ಅತ್ಯಾಚಾರದ ದೂರು ದಾಖಲಿಸಿದ್ದರು. ತಮ್ಮನ್ನು ವಿವಾಹವಾಗಿದ್ದರೂ ಬೇರೆ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ ಎಂದು ಮೈತ್ರಿಯಾ ಕಾರ್ತಿಕ್ ವಿರುದ್ಧ ದೂರಿದ್ದಾರೆ. ಕಾರ್ತಿಕ್ ತನ್ನನ್ನು ವಿವಿಧ ಕಡೆ ಅತ್ಯಾಚಾರ ಮಾಡಿದ್ದಾನೆ ಎಂದು ಮೈತ್ರಿಯಾ ದೂರಿನಲ್ಲಿ ತಿಳಿಸಿದ್ದರು. 

ವೆಬ್ದುನಿಯಾವನ್ನು ಓದಿ