ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆ ಸಿಇಟಿ ಫಲಿತಾಂಶ ಮುಂದೂಡಿದ ಕೆಇಎ

ಶುಕ್ರವಾರ, 22 ಮೇ 2015 (12:56 IST)
ಪಿಯು ಫಲಿತಾಂಶದಲ್ಲಿ ಗೊಂದಲ ಉಂಟಾಗಿರುವ ಹಿನ್ನೆಲೆಯಲ್ಲಿ ಮೇ 26ರಂದು ಪ್ರಕಟವಾಗಬೇಕಿದ್ದ ಸಿಇಟಿ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇಂದು ಮುಂದೂಡಿದೆ. 
 
ಫಲಿತಾಂಶದಲ್ಲಿ ಗೊಂದಲ ಉಂಟಾಗಿರುವ ಹಿನ್ನೆಲೆಯಲ್ಲಿ ಕೆಇಎ ಈ ನಿರ್ಧಾರ ಕೈಗೊಂಡಿದ್ದು, ವಿದ್ಯಾರ್ಥಿಗಳ ಒತ್ತಾಸೆಯಂತೆ ಈಡೇರಿದಂತಾಗಿದೆ. 
 
ಇನ್ನು ಫಲಿತಾಂಶದಲ್ಲಿ ಯಡವಟ್ಟು ಕಂಡು ಬಂದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆ ನಡೆಸುತ್ತಿದ್ದು, ಈ ವೇಳೆ ಸರ್ಕಾರ ಸಿಇಟಿ ಫಲಿತಾಂಶವನ್ನು ಪ್ರಕಟಿಸಲು ಮುಂದಾಗಿದೆ. ಆದರೆ ನಮಗೆ ಸೂಕ್ತ ನ್ಯಾಯ ಸಿಗದೆ ಸಿಇಟಿ ಫಲಿತಾಂಶ ಪ್ರಕಟಿಸಬಾರದು. ಬಳಿಕ ನಾವು ಮುಂದಿನ ವಿದ್ಯಾಭ್ಯಾಸಗಳಿಗೆ ಸೇರುವಲ್ಲಿ ವಂಚಿತರಾಗಲಿದ್ದೇವೆ ಎಂದು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಇಟಿ ಫಲಿತಾಂಶವನ್ನು ಪ್ರಾಧಿಕಾರ ಮುಂದೂಡಿದೆ. ಆದರೆ ಎಷ್ಟು ದಿನಗಳ ವರೆಗೆ ಎಂಬುದನ್ನು ಪ್ರಾಧಿಕಾರ ಪ್ರಕಟಿಸಿಲ್ಲ. 
 
ಪಿಯುಸಿ ಫಲಿತಾಂಶವು ಕಳೆದ ಮೇ 18ರಂದು ಪ್ರಕಟವಾಗಿದ್ದು, ಸರ್ಕಾರವೇ 3 ವೆಬ್‌ಸೈಟ್‌ಗಳನ್ನು ಬಿಡುಗಡೆ ಗೊಳಿಸಿತ್ತು. ಆದರೆ ಒಂದೊಂದು ವೆಬ್‌ಸೈಟ್‌ಗಳಲ್ಲಿ ಒಂದೊಂದು ತೆರನಾದ ಫಲಿತಾಂಶ ಪ್ರದರ್ಶನವಾಗುತ್ತಿದೆ. ಉದಾಹರಣೆಗೆ ಒಂದರಲ್ಲಿ ಒಂದು ತೆರನಾದ ಅಂಕಗಳಿದ್ದರೆ, ಮತ್ತೊಂದರಲ್ಲಿ ಮತ್ತೊಂದು ತೆರನಾದ ಅಂಕ ಪ್ರದರ್ಶನವಾಗುತ್ತಿದೆ. ಅಂತೆಯೇ ಒಂದರಲ್ಲಿ ಕಡಿಮೆ ಅಂಕ ತೋರುತ್ತಿದೆ ಎಂದು ಆತಂಕಕ್ಕೀಡಾಗಿರುವಾಗಲೇ ಮತ್ತೊಂದರಲ್ಲಿ ಪರೀಕ್ಷೆಗೆ ಗೈರು ಹಾಜರು ಎಂದು ತೋರಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ತೀವ್ರ ಆತಂಕಕ್ಕೀಡಾಗಿದ್ದು, ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯು ನಾಲ್ಕನೇ ದಿನವಾದ ಇಂದೂ ಮುಂದುವರಿದಿದೆ. ಈ ವೇಳೆ ವಿದ್ಯಾರ್ಥಿಗಳು ಸಿಇಟಿ ಫಲಿತಾಂಶ ಮುಂದೂಡಬೇಕೆಂದು ಮಾಧ್ಯಮಗಳೆದುರು ಸರ್ಕಾರ್ಕಕೆ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಾಧಿಕಾರ ಪ್ರಕಟಣೆಯನ್ನು ಮುಂದೂಡಿದೆ. 

ವೆಬ್ದುನಿಯಾವನ್ನು ಓದಿ