ಭಷ್ಟಾಚಾರಿ ಸಚಿವನನ್ನು ಸಂಪುಟದಿಂದ ಹೊರದಬ್ಬಿದ ಕೇಜ್ರಿವಾಲ್

ಶುಕ್ರವಾರ, 9 ಅಕ್ಟೋಬರ್ 2015 (17:47 IST)
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಸಂಪುಟದ ಆಹಾರ ಸಚಿವರನ್ನು ಇಂದು ಮಾಧ್ಯಮಗಳ ಸಮ್ಮುಖದಲ್ಲಿಯೇ ವಜಾಗೊಳಿಸಿದ್ದಾರೆ. 
 
ಕೇಜ್ರಿವಾಲ್ ಸಂಪುಟದ ಸದಸ್ಯರಾಗಿದ್ದ ಅಸೀಮ್ ಮೊಹಮ್ಮದ್ ಖಾನ್ ಅವರೇ ವಜಾಗೊಂಡ ಸಚಿವರಾಗಿದ್ದು, ಇವರು ಆಹಾರ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಲದೆ ಸಚಿವ ಸ್ಥಾನ ಅಲಂಕರಿಸಿದ್ದೇನೆ ಎಂಬ ಅಹಂನಿಂದ ಬಿಲ್ಡರ್ ಓರ್ವರಿಂದ 6 ಲಕ್ಷ ರೂ. ಲಂಚ ಪಡೆದಿದ್ದಾರೆ ಎಂಬ ಕಾರಣದಿಂದ ಕೇಜ್ರಿವಾಲ್ ತಮ್ಮ ಸಂಪುಟದಿಂದಲೇ ಕೈ ಬಿಟ್ಟಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಧಾನಸೌಧದ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಆದರೆ ಸಚಿವರು ಲಂಚ ನೀಡುವಂತೆ ತಾಕೀತು ಮಾಡಿ ಬಿಲ್ಡರ್‌ ನಿರ್ವಹಿಸುತ್ತಿದ್ದ ಕೆಲಸಕ್ಕೆ ತಡೆಯೊಡ್ಡಿದ್ದರು. ಈ ಹಿನ್ನೆಲೆಯಲ್ಲಿ ಬಿಲ್ಡರ್ ಸಚಿವರಿಗೆ 6 ಲಕ್ಷ ರೂ. ಲಂಚ ನೀಡಿದ್ದಾರೆ ಎಂದರು. 
 
ಈ ಸಂಬಂಧ ಮಾಹಿತಿ ಲಭ್ಯವಾಗಿದ್ದು, ಮಾಹಿತಿ ನೀಡಿದ ವ್ಯಕ್ತಿಯ ಹಿತದೃಷ್ಟಿಯಿಂದ ನಾನು ಹೆಸರನ್ನು ಬಹಿರಂಗಗೊಳಿಸುವುದಿಲ್ಲ. ಆದರೆ ಇದಕ್ಕೆ ಸಂಬಂಧಿಸಿದಂತೆ 1 ಗಂಟೆಗೂ ಮೀರಿದ ದೂರವಾಣಿ ಸಂಭಾಷಣೆ ಲಭ್ಯವಾಗಿದ್ದು, ಅದರ ಕೆಲ ತುಣುಕುಗಳನ್ನು ನಿಮಗೆ ಈಗಾಗಲೇ ನೀಡಿದ್ದೇನೆ. ಈ ಮೂಲಕ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಸಂಪುಟದಿಂದ ಹೊರ ಹಾಕಿದ್ದು, ನಾನು ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂದರು.  

ವೆಬ್ದುನಿಯಾವನ್ನು ಓದಿ