ಸಚಿವ ಕಿಮ್ಮನೆ ಬೇಜವಾಬ್ದಾರಿಯುತ ಸಚಿವ: ಶೆಟ್ಟರ್

ಶುಕ್ರವಾರ, 22 ಮೇ 2015 (17:36 IST)
ಪಿಯು ಫಲಿತಾಂಶ ಗೊಂದಲದಿಂದ ಕೂಡಿರುವ ಪರಿಣಾಮ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ವಿಧಾನಸಭಾ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರು ಪ್ರತಿಕ್ರಿಯಿಸಿದ್ದು, ಮೌಲ್ಯಮಾಪನ ಹಾಗೂ ಶ್ರೇಯಾಂಕ ನೀಡುವಲ್ಲಿ ಅಧಿಕಾರಿಗಳು ತಪ್ಪೆಸಗಿದ್ದರೂ ಕೂಡ ಸಚಿವ ಕಿಮ್ಮನೆ ರತ್ನಾಕರ್ ಅವರು ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 
 
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೌಲ್ಯಮಾಪನದಲ್ಲಿ, ಶ್ರೇಯಾಂಕ ನೀಡುವಲ್ಲಿ ಲೋಪ ದೋಷಗಳು ಕಂಡು ಬರುತ್ತಿವೆ. ಎಲ್ಲವೂ ಅಧಿಕಾರಿಗಳ ದುರ್ನಡತೆಯಿಂದ ನಡೆದವುಗಳಾಗಿವೆ. ಆದ್ದರಿಂದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. 
 
ಇದೇ ವೇಳೆ, ರಾಜ್ಯದ ಶಿಕ್ಷಣ ಸಚಿವರಾಗಿರುವ ಕಿಮ್ಮನೆ ರತ್ನಾಕರ್ ಅವರು ಜವಾಬ್ದಾರಿಯುತವಾಗಿ ವರ್ತಿಸದೆ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಶೆಟ್ಟರ್, ಕಳೆದ ದಿನಗಳಲ್ಲಿ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗದೆ ರೈತರು ಆತ್ಮಹತ್ಯೆ ಮಾಡುಕೊಳ್ಳುತ್ತಿದ್ದುದನ್ನು ನಾವು ನೋಡಿದ್ದೆವು. ಆದರೆ ಪ್ರಸ್ತುತ ಫಲಿತಾಂಶದಲ್ಲಿ ಗೊಂದಲವಿರುವ ಪರಿಣಾಮ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸನ್ನಿವೇಶವನ್ನು ನೋಡುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು. 
 
ಪಿಯುಸಿ ವಿದ್ಯಾರ್ಥಿಗಳು ಅಂಕ ನೀಡವಲ್ಲಿ ಪರೀಕ್ಷಾ ಮಂಡಳಿ ದ್ವಂದ್ವ ನೀತಿ ಅನುಸರಿಸಿದ್ದು, ನಮಗೆ ಅನ್ಯಾಯವಾಗಿದೆ. ಒಂದೊಂದು ವೆಬ್‌ಸೈಟ್‌ನಲ್ಲಿ ಒಂದೊಂದು ತೆರನಾದ ಫಲಿತಾಂಶ ಪ್ರದರ್ಶಿತವಾಗುತ್ತಿದೆ ಎಂದು ಆರೋಪಿಸಿ ಮಂಡಳಿಯ ವಿರುದ್ಧ ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆಯಲ್ಲಿ ತೊಡಗಿದ್ದರು. ಈ ಹಿನ್ನೆಲೆಯಲ್ಲಿ ಶೆಟ್ಟರ್ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.  

ವೆಬ್ದುನಿಯಾವನ್ನು ಓದಿ