ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಿಸುವಂತೆ ವಿಧಾನಸಭೆಯಲ್ಲಿ ಎಚ್`ಡಿಕೆ ಮನವಿ

ಮಂಗಳವಾರ, 21 ಮಾರ್ಚ್ 2017 (11:50 IST)
ಗೌರವ ಧನ 7ರಿಂದ 10 ಸಾವಿರಕ್ಕೆ ಏರಿಕೆ, ನಿವೃತ್ತಿ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ನಡೆಸುತ್ತಿರುವ ಹೋರಾಟ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದೆ. ಮಾಜಿ ಸಿಎಂ ಕುಮಾರಸ್ವಾಮಿ ಸದನದಲ್ಲಿ ವಿಷಯ ಪ್ರಸ್ತಾಪಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ನ್ಯಾಯಯುತವಾಗಿದೆ. ವೇತನವನ್ನ 7 ಸಾವಿರದಿಂದ 10 ಸಾವಿರಕ್ಕೆ ಏರಿಸಿದರೆ ಸರ್ಕಾರಕ್ಕೆ ಹೊರೆಯಾಗುವುದಿಲ್ಲ. ಕಾರ್ಯಕರ್ತೆಯರ ಬೇಡಿಕೆಯನ್ನ ಪರಿಗಣಿಸಿ, ಸರ್ಕಾರ ಅವರ ಕನಿಷ್ಠ ವೇತನ ಹೆಚ್ಚಿಸಬೇಕು ಎಂದು ಕುಮಾರಸ್ವಾಮಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ನೆರೆಯ ಕೇರಳ ಮತ್ತು ತಮಿಳುನಾಡಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಒಳ್ಳೆಯ ವೇತನದ ವ್ಯವಸ್ಥೆ ಇದೆ, ರಾಜ್ಯದಲ್ಲೂ ಮಾನವೀಯತೆ ದೃಷ್ಟಿಯಿಂದ ವೇತನ ಹೆಚ್ಚಿಸಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.

ಇದೇವೇಳೆ, ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಕುಡಿಯುವ ನೀರು, ಊಟ ಮತ್ತು ಶೌಚಾಲಯದ ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಎಚ್`ಡಿಕೆ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ