ಬಿಜೆಪಿ-ಜೆಡಿಎಸ್ ಮೈತ್ರಿ ಚರ್ಚೆ: ಚೆಲುವರಾಯ ಸ್ವಾಮಿಗೆ ಟಾಂಗ್ ನೀಡಿದ ಕುಮಾರಸ್ವಾಮಿ

ಮಂಗಳವಾರ, 31 ಮೇ 2016 (18:15 IST)
ರಾಜ್ಯಸಭೆ ಚುನಾವಣೆಗೆ ಜಿಡಿಎಸ್-ಬಿಜೆಪಿ ಮೈತ್ರಿ ಚರ್ಚೆ ಕುರಿತು ಚೆಲುವರಾಯಸ್ವಾಮಿ ಅವರಿಗೆ ತಿಳಿದಿಲ್ಲ, ಅವರಿಗೆ ಪೋನ್ ಮೂಲಕ ಮಾಹಿತಿ ನೀಡಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
 
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್ ಬಂಡಾಯ ಶಾಸಕ ಚೆಲುವರಾಯ ಸ್ವಾಮಿ ಪಕ್ಷದ ಶಾಸಕಾಂಗ ಸಭೆಗೆ ಗೈರು ಹಾಜರಾಗಿದ್ದರು, ರಾಜ್ಯಸಭೆ ಚುನಾವಣೆಗೆ ಬಿಜೆಪಿ-ಜಿಡಿಎಸ್ ಮೈತ್ರಿ ಕುರಿತ ಚರ್ಚೆ ಅವರಿಗೆ ತಿಳಿದಿಲ್ಲ, ಅವರಿಗೆ ಪೋನ್ ಮೂಲಕ ಮಾಹಿತಿ ನೀಡಿ ಎಂದು ವ್ಯಂಗ್ಯವಾಡಿದ್ದಾರೆ.
 
ಚೆಲುವರಾಯಸ್ವಾಮಿ ಅವರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ತಿಳಿಸಿದ್ದು, ನಾವು ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಪಣತೊಟ್ಟಿದ್ದೇವೆ. ಕುಂಬಳಕಾಯಿ ಕಳ್ಳ ಎಂದರೆ ಅವರು ಯಾಕೋ ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ ತಿಳಿಯದು ಎಂದು ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
 
ಮುಖ್ಯಮಂತ್ರಿ ಜನತಾ ದರ್ಶನದಲ್ಲಿ ದಲಿತ ಮಹಿಳೆಗೆ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಎಚ್‌.ಡಿ.ಕುಮಾರಸ್ವಾಮಿ, ಪ್ರಕರಣದ ಬಳಿಕ ದಲಿತ ಮಹಿಳೆಗೆ ಜೀವನ ನಡೆಸುವುದು ಕಷ್ಟವಾಗಿದೆ. ಇದರಿಂದ ಅವರಿಗೆ ಬೇಕರಿ ಉದ್ಯಮ ಪ್ರಾರಂಭಿಸಲು 2 ಲಕ್ಷ ರೂಪಾಯಿ ಹಣ ನೀಡಿದ್ದೇನೆ. ಮಹಿಳೆಗೆ ಹಕ್ಕುಪತ್ರ ನೀಡಲು ಶಾಸಕ ಗೋಪಾಲಯ್ಯ ಹಾಗೂ ಉಪ ಮೇಯರ್ ಹೇಮಲತಾ ಅವರಿಗೆ ಸೂಚನೆ ನೀಡಿದ್ದೇನೆ. ಅವರು ಮಹಿಳೆಗೆ ಹಕ್ಕುಪತ್ರ ಕೊಡಿಸಲು ಯತ್ನಿಸುತ್ತಿದ್ದಾರೆ ಎಂದು ಹೇಳಿದರು.
 
ಆದರೆ, ದಲಿತ ಮಹಿಳೆಗೆ ಹಕ್ಕುಪತ್ರ ಕೊಡಿಸುವ ಯತ್ನಕ್ಕೆ ರಾಜ್ಯ ಸರ್ಕಾರ ಅಡ್ಡಗಾಲು ಹಾಕುತ್ತಿದೆ. ದಲಿತ ಮಹಿಳೆಯ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ರಾಜ್ಯ ಸರ್ಕಾರಕ್ಕೆ 3 ದಿನದ ಗಡುವು ನೀಡಿದೆ. ಆದರೆ, ವಿಧಾನ ಪರಿಷತ್ ಹಾಗೂ ರಾಜ್ಯಸಭೆ ಚುನಾವಣೆ ಸಮೀಪಿಸುತ್ತಿರುವ ಕಾರಣದಿಂದ ಪ್ರತಿಭಟನೆಯನ್ನು ಕೆಲ ದಿನ ಮುಂದೂಡಿದ್ದೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ