ಮತ್ತೊಂದು ಹೊಸ ಬಾಂಬ್ ಸಿಡಿಸಿದ ಲಲಿತ್ ಮೋದಿ: ಮೂವರು ಕ್ರಿಕೇಟಿಗರಿಗೆ ಲಂಚ ರವಾನೆ

ಭಾನುವಾರ, 28 ಜೂನ್ 2015 (11:21 IST)
ಐಪಿಎಲ್‌‌‌ನ ಮಾಜಿ ವಿವಾದಿತ ಅಧ್ಯಕ್ಷ ಲಲಿತ್‌ ಮೋದಿ ಅವರು ಇಂದು ಮತ್ತೆ ಹೊಸ ಬಾಂಬ್ ವೊಂದನ್ನು ಸಿಡಿಸಿದ್ದು, ಮೂವರು ಅಂತಾರಾಷ್ಟ್ರೀಯ ಕ್ರಿಕೆಟ್‌ ಆಟಗಾರರ ಮೇಲೆ ಲಂಚ ಪಡೆದ ಆರೋಪವನ್ನು ಹೊರಿಸಿದ್ದಾರೆ. 
 
ಲಲಿತ್ ಮೋದಿ ಸಿಡಿಸಿರುವ ಈ ಬಾಂಬ್ ನಲ್ಲಿ ಭಾರತ ಕ್ರಿಕೆಟ್‌ ತಂಡದ ಇಬ್ಬರು ಮುಂಚೂಣಿ ಆಟಗಾರರು ಹಾಗೂ ಓರ್ವ ವೆಸ್ಟ್‌ ಇಂಡೀಸ್‌ ಆಟಗಾರ ಸೇರಿದ್ದು, ಮೂವರೂ ಕೂಡ ಲಂಚ ಪಡೆದಿದ್ದಾರೆ ಎಂಬ ಆರೋಪವನ್ನು ಹೊರಿಸಿದ್ದಾರೆ. 
 
ಈ ಸಂಬಂಧ ಲಲಿತ್ ಮೋದಿ ಟ್ವೀಟ್ ಮಾಡಿದ್ದು ಅವರ ಪ್ರಕಾರ, ಈ ಮೂವರು ಆಟಗಾರರೂ ಕೂಡ ರಿಯಲ್‌ ಎಸ್ಟೇಟ್‌ ಉದ್ಯಮಿಯೋರ್ವರಿಂದ ಲಂಚ ಪಡೆದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೆಲವು ಅಗತ್ಯ ಮಾಹಿತಿಗಳನ್ನು ಅಂದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ ಸಿಇಓ ಡೇವ್‌ ರಿಚರ್ಡಸನ್‌ ಅವರಿಗೆ 2013ರ ಜೂನ್‌ನಲ್ಲಿಯೇ ನೀಡಿರುವುದಾಗಿ ತಿಳಿಸಿರುವ ಅವರು, ಇಷ್ಟಲ್ಲದೆ ಕ್ರಿಕೆಟ್‌ನಲ್ಲಿ ನಡೆಯುವ ಅವ್ಯವಹಾರಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಭ್ರಷ್ಟಾಚಾರ ವಿರೋಧಿ ಮತ್ತು ಭಧ್ರತಾ ಘಟಕಗಳನ್ನು ಸ್ಥಾಪಿಸುವಂತೆ ಸಿಇಓ ಅವರಿಗೆ ಮನವಿ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. 
 
ಕೊನೆಯಲ್ಲಿ ಲಂಚ ಪಡೆದಿರುವ ಮೂವರು ಆಟಗಾರರು ರಿಯಲ್‌ ಎಸ್ಟೇಟ್‌ ಉದ್ಯಮಿಗೆ ಬಹಳ ಆಪ್ತರಾಗಿದ್ದಾರೆ. ಆದರೆ ಇವರು ಲಂಚ ಪಡೆದ ಬಗ್ಗೆ ಕೇವಲ ಬಲ್ಲ ಮೂಲಗಳಿಂದ ತಿಳಿದಿದೆ. ಇದು ಸತ್ಯವಲ್ಲ ಎಂಬುದು ನನ್ನ ಭಾವನೆ. ಒಂದು ವೇಳೆ ಈ ಆರೋಪ ಸತ್ಯವಾಗಿದ್ದಲ್ಲಿ ಇದರಲ್ಲಿ ಇನ್ನೂ ಹಲವು ಮಂದಿ ಆಟಗಾರರು ಭಾಗಿಯಾಗಿರಬಹುದು  ಎಂದೂ ಕೂಡ ಲಲಿತ್ ಮೋದಿ ಟ್ವೀಟ್ ಮಾಡಿದ್ದಾರೆ. 

ವೆಬ್ದುನಿಯಾವನ್ನು ಓದಿ