ಭಾಷಾ ಮಾಧ್ಯಮ ವಿಷಯದಲ್ಲಿ ಕನ್ನಡಕ್ಕೆ ಅನ್ಯಾಯ: ಸಿದ್ದರಾಮಯ್ಯ

ಶನಿವಾರ, 1 ನವೆಂಬರ್ 2014 (12:32 IST)
ಭಾಷಾ ಮಾಧ್ಯಮ ವಿಷಯದಲ್ಲಿ ಕನ್ನಡಕ್ಕೆ ಅನ್ಯಾಯವಾಗಿದೆ. ಕನ್ನಡ ನಮ್ಮ ಪರಿಸರ ಭಾಷೆ. ಭಾಷಾ ಮಾಧ್ಯಮ ಕನ್ನಡದಲ್ಲೇ ಇರಬೇಕೆಂಬುದು ನಮ್ಮ ಇಚ್ಛೆ.  ಪ್ರಧಾನಿ ಭೇಟಿ ಮಾಡಿ ಸಂವಿಧಾನಕ್ಕೆ ತಿದ್ದುಪಡಿ ಬಗ್ಗೆ ಮನವರಿಕೆ ಮಾಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡುತ್ತಾ ಹೇಳಿದರು.

ಇತ್ತೀಚೆಗೆ ಸುಪ್ರೀಂಕೋರ್ಟ್  ಮಾತೃಭಾಷೆಯಲ್ಲೇ ಶಿಕ್ಷಣ ನೀಡಬೇಕೆಂಬ ಸರ್ಕಾರದ ತೀರ್ಮಾನಕ್ಕೆ ವಿರೋಧಿಸಿ ತೀರ್ಪು ನೀಡಿತ್ತು. ಕನ್ನಡ ಭಾಷಾ ಮಾಧ್ಯಮವಾಗಿರಬಾರದು ಎಂದು ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಸಂವಿಧಾನಕ್ಕೆ ತಿದ್ದುಪಡಿ ಮಾಡಲು ಸಿದ್ದರಾಮಯ್ಯ ಬಯಸಿದ್ದಾರೆ. 
 
ಅಭಿವೃದ್ಧಿ ಹೆಸರಲ್ಲಿ ರಾಜ್ಯವನ್ನು ಒಡೆಯುವ ಮಾತನಾಡುತ್ತಿದ್ದಾರೆ. ಕನ್ನಡ ನಾಡು ಒಡೆಯಲು ಯಾವ ಕಾರಣಕ್ಕೂ ಬಿಡಲ್ಲ. ನಂಜುಂಡಪ್ಪ ವರದಿ ಅನುಷ್ಠಾನ ಮಾಡುತ್ತೇವೆ. ಅಧಿಕಾರದಲ್ಲಿದ್ದಾಗ ರಾಜ್ಯದ ಅಭಿವೃದ್ಧಿ ಬಗ್ಗೆ ಮಾತನಾಡಲಿಲ್ಲ ಎಂದು ಉಮೇಶ್ ಕತ್ತಿಯವರಿಗೆ ಸಿಎಂ ಟಾಂಗ್ ನೀಡಿದರು.
 
ಶಾಲೆಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳನ್ನು ಈ ಸಂದರ್ಭದಲ್ಲಿ ಸಿಎಂ ಖಂಡಿಸಿದರು. ಮಕ್ಕಳಿಗೆ ಭದ್ರತೆ ನೀಡದ ಆಡಳಿತ ಮಂಡಳಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಮಾರ್ಗಸೂಚಿ ಪಾಲಿಸದ ಶಾಲೆಗಳ ಮಾನ್ಯತೆ ರದ್ದು ಮಾಡುವುದಾಗಿ ಸಿಎಂ ಹೇಳಿದರು.

ವೆಬ್ದುನಿಯಾವನ್ನು ಓದಿ