ಸಿಯಾಚಿನ್ ಹುತಾತ್ಮ ಯೋಧರಿಬ್ಬರಿಗೆ ಅಂತಿಮ ನಮನ: ಕುಟುಂಬಸ್ಥರ ಆಕ್ರಂದನ

ಮಂಗಳವಾರ, 16 ಫೆಬ್ರವರಿ 2016 (13:19 IST)
ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿ ಹುತಾತ್ಮರಾದ ಯೋಧ ಟಿ.ಟಿ. ನಾಗೇಶ್ ಅವರ ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ನೆರೆದು ಪುಷ್ಪ ನಮನ ಸಲ್ಲಿಸಿದರು.  ದಾರಿಯುದ್ದಕ್ಕೂ ಸಾವಿರಾರು ಜನರು ನೆರೆದು ಅಂತಿಮ ನಮನ ಸಲ್ಲಿಸಿದರು.   ಮೆರವಣಿಗೆಯ ನಂತರ ನಾಗೇಶ್ ಅವರ ಹುಟ್ಟೂರು ತೇಜೂರು ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ದೇಶಕ್ಕಾಗಿ ಪ್ರಾಣಬಿಟ್ಟ ಯೋಧನಿಗೆ ಭಾವಪೂರ್ಣ ವಿದಾಯ ಸಲ್ಲಿಸಲಾಯಿತು.

ಹುತಾತ್ಮ ನಾಗೇಶ್ ಪರ  ಅಮರ್ ರಹೆ ನಾಗೇಶ್, ವೀರ ಯೋಧ ನಾಗೇಶ್ಗೆ ಜೈ ಎಂಬ ಘೋಷಣೆಗಳನ್ನು ಜನರು ಕೂಗಿದರು.  ಮದ್ರಾಸ್ ರೆಜಿಮೆಂಟ್ ಸೈನಿಕರು ವೀರಯೋಧನ ಅಂತಿಮ ಸಂಸ್ಕಾರಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿದ್ದರು.  ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದು, ಭಾವೋದ್ವೇಗದ ಸನ್ನಿವೇಶ ಅಲ್ಲಿ ನಿರ್ಮಾಣವಾಯಿತು. ಬಂಧುಬಾಂಧವರ ಆಕ್ರಂದನ ಮುಗಿಲು ಮುಟ್ಟಿತು.
 
 ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲೂಕಿನ ಹುತಾತ್ಮ ಯೋಧ ಮಹೇಶ್ ಅವರ ಅಂತಿಮ ಕ್ರಿಯೆ  ಹುಟ್ಟೂರು ಪಶುಪತಿ ಗ್ರಾಮದಲ್ಲಿ ಮಧ್ಯಾಹ್ನ 2 ಗಂಟೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.

 ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯೋಧ ಮಹೇಶ್ ಕುಟುಂಬಸ್ಥರಿಗೆ 25 ಲಕ್ಷ ರೂ.ಗಳ ಚೆಕ್ ವಿತರಿಸುವ ಮೂಲಕ ಗೌರವ ಸಲ್ಲಿಸಿದ್ದಾರೆ.  ಮೈಸೂರಿನ ಹೆಚ್.ಡಿ.ಕೋಟೆ ಜೂನಿಯರ್ ಕಾಲೇಜು ಆವರಣದಲ್ಲಿ  ಮಹೇಶ್ ಪಾರ್ಥಿವ ಶರೀರಕ್ಕೆ ಸಿಎಂ ಸಿದ್ದರಾಮಯ್ಯ  ಅಂತಿಮ ನಮನ ಸಲ್ಲಿಸಿದರು.ಎಚ್.ಡಿ.ಕೋಟೆಯಲ್ಲಿ ಸ್ವಯಂಪ್ರೇರಣೆಯಿಂದ ಅಂಗಡಿ, ಮುಂಗಟ್ಟುಗಳು ಬಂದ್ ಆಗಿವೆ. 

ವೆಬ್ದುನಿಯಾವನ್ನು ಓದಿ