ಸ್ವಗ್ರಾಮದಲ್ಲಿ ಹನುಮಂತಪ್ಪ ಅಂತ್ಯಸಂಸ್ಕಾರ; ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ

ಶುಕ್ರವಾರ, 12 ಫೆಬ್ರವರಿ 2016 (10:22 IST)
ಗುರುವಾರ ನವದೆಹಲಿಯ ಆರ್‌ಆರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ವೀರಯೋಧ ಹನುಮಂತಪ್ಪ ಕೊಪ್ಪದ್ ಅವರ ಅಂತ್ಯಸಂಸ್ಕಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಅವರ ಸ್ವಗ್ರಾಮ ಬೆಟದೂರಿನಲ್ಲಿ ನಡೆಯಲಿದೆ. 

ನಿನ್ನೆ ರಾತ್ರಿ ಹುಬ್ಬಳ್ಳಿ ತಲುಪಿದ್ದ ಪಾರ್ಥಿವ ಶರೀರವನ್ನು ಮುಂಜಾನೆಯವರೆಗೆ ಕಿಮ್ಸ್ ಆಸ್ಪತ್ರೆಯಲ್ಲಿ ಇಡಲಾಗಿತ್ತು. ಮುಂಜಾನೆ 7.30 ಗಂಟೆಗೆ ತೆರೆದ ಸೇನಾ ವಾಹನದಲ್ಲಿ ಪಾರ್ಥಿವ ಶರೀರವನ್ನು ಹುಬ್ಬಳ್ಳಿ-ಧಾರವಾಡ ರಸ್ತೆ, ಹೊಸೂರು ಸರ್ಕಲ್, ಬಸವ ವನ, ಕಿತ್ತೂರ್‌ ರಾಣಿ ಚೆನ್ನಮ್ಮ ವೃತ್ತದ ಮೂಲಕ ನೆಹರು ಮೈದಾನಕ್ಕೆ ತರಲಾಯಿತು
 
ಬ್ರಿಗೇಡಿಯರ್ ಪ್ರವೀಣ ಸಿಂಧೆ ನೇತೃತ್ವದಲ್ಲಿ ಸಾಗಿದ ಮೆರವಣಿಗೆಯಲ್ಲಿ  ಜಿಲ್ಲಾಧಿಕಾರಿ ರಾಜೇಂದ್ರ ಚೋಳನ್‌, ಶಾಸಕ ಅಬ್ಬಯ್ಯ ಪ್ರಸಾದ, ಯೋಧನ ತಾಯಿ ಬಸಮ್ಮ, ಪತ್ನಿ ಮಹಾದೇವಿ ಮತ್ತು ಸಂಬಂಧಿಕರು ಕೂಡ ಉಪಸ್ಥಿತರಿದ್ದರು. 
 
ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಅನಂತಕುಮಾರ್, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ, ಗ್ರಾಮೀಣಾಭಿವೃದ್ಧಿ ಹೆಚ್ ಕೆ ಪಾಟೀಲ್, ಮಾಜಿ ಸಚಿವ ಎಸ್ ಆರ್ ಬೊಮ್ಮಾಯಿ, ರಾಜ್ಯಸಭಾ ಸದಸ್ಯ ರಾಜೀವ ಚಂದ್ರಶೇಖರ, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಶಾಸಕ  ಅರವಿಂದ ಬೆಲ್ಲದ್, ಶ್ವಾಸಗುರು ವಚನಾನಂದ ಸ್ವಾಮೀಜಿ, ಆನಂದ್ ಗುರೂಜಿ, ರಂಭಾಪುರಿ ಶ್ರೀಗಳು, ಮೂರುಸಾವಿರಮಠದ ಶ್ರೀಗಳು,  ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಸೇರಿದಂತೆ ಹಲವಾರು ಗಣ್ಯರು, ಸಾವಿರಾರು ಸಂಖ್ಯೆಯ ಜನರು ವೀರಯೋಧನ ಅಂತಿಮ ದರ್ಶನ ಪಡೆದರು.
 
10.15 ರ ಸುಮಾರಿಗೆ ಅಂಬುಲೆನ್ಸ್‌ನಲ್ಲಿ  ಪಾರ್ಥಿವ ಶರೀರವನ್ನು  ಧಾರವಾಡ ಜಿಲ್ಲೆಯ ಕುಂದಗೊಳದಲ್ಲಿರುವ ಬೆಟದೂರಿಗೆ ಸಾಗಿಸಲಾಯಿತು. ಈ ಸಂದರ್ಭದಲ್ಲಿ ಮತ್ತೆ ಹುಟ್ಟಿ ಬಾ ಸಿಯಾಚಿನ್ ಹೀರೋ', 'ಅಮರ್ ರಹೇ ಹನುಮಂತಪ್ಪ ಕೊಪ್ಪದ್‌' ಘೋಷಣೆಗಳು ಮೊಳಗಿದವು.
 
ಗ್ರಾಮದಲ್ಲಿ ಸಹ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬಳಿಕ ವಿಧಿವಿಧಾನಗಳನ್ನು ಪೂರೈಸಿ 2 ಗಂಟೆ ಸುಮಾರಿಗೆ ಅಂತಿಮ ಸಂಸ್ಕಾರವನ್ನು ನಡೆಸಲಾಗುವುದು ಎಂದು ತಿಳಿದು ಬಂದಿದೆ. 

ವೆಬ್ದುನಿಯಾವನ್ನು ಓದಿ