ತನಿಖೆಯಲ್ಲಿ ವಿಳಂಬ: ಕಮಲ್ ಪಂತ್ ವಿರುದ್ಧ ಪಿಐಎಲ್ ಸಲ್ಲಿಕೆ

ಶುಕ್ರವಾರ, 31 ಜುಲೈ 2015 (16:56 IST)
ರಾಜ್ಯ ಲೋಕಾಯುಕ್ತ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣದ ತನಿಖೆಯಲ್ಲಿ ವಿಳಂಬ ಧೋರಣೆಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಹೈಕೋರ್ಟ್‌ನಲ್ಲಿ ವಿಶೇಷ ತನಿಖಾ ತಂಡದಲ್ಲಿನ ಮೂವರು ಉನ್ನತ ತನಿಖಾಧಿಕಾರಿಗಳ ವಿರುದ್ಧ ಹೈಕೋರ್ಟ್‌ನಲ್ಲಿ ಪಿಐಎಲ್ ಅರ್ಜಿ ಸಲ್ಲಿಸಿದ್ದೇನೆ ಎಂಬುದಾಗಿ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ ತಿಳಿಸಿದ್ದಾರೆ. 
 
ನಗದರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಕರಣದ ತನಿಖೆಗಾಗಿ ಸರ್ಕಾರ ರಚಿಸಿರುವ ಎಸ್ಐಟಿ ಮೇಲೆ ನಮಗೆ 0ನಂಬಿಕೆ ಇಲ್ಲ. ಅಲ್ಲದೆ ತನಿಖಾಧಿಕಾರಿಗಳು ತನಿಖೆಯನ್ನು ನಡೆಸುವಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತಿದ್ದಾರೆ. ಆದ್ದರಿಂದ ತನಿಖಾಧಿಕಾರಿಗಳ ವಿರುದ್ಧ ಪಿಐಎಲ್ ಸಲ್ಲಿಸಲಾಗಿದೆ  ಎಂದರು.
 
ಬಳಿಕ, ತಂಡದಲ್ಲಿ ಉನ್ನತಾಧಿಕಾರಿಗಳಾಗಿರುವ ಕಮಲ್ ಪಂತ್, ಲಾಬೂರಾಮ್ ಹಾಗೂ ಮತ್ತೋರ್ವ ಅಧಿಕಾರಿಯ ವಿರುದ್ಧ ದೂರು ನೀಡಿದ್ದು, ತನಿಖೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಪ್ರಕರಣದಲ್ಲಿ ಕೆಲ ಮಂದಿ ರಾಜಕೀಯ ಪ್ರತಿನಿಧಿಗಳೂ ಹಾಗೂ ಪ್ರಭಾವಿಗಳೂ ಇರುವ ಕಾರಣ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದ್ದೇನೆ ಎಂದರು. 
 
ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಅಕ್ರಮ ನಡೆಸಿದ್ದೀರಿ ಎಂದು ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ ರಾವ್ ಅವರ ಪುತ್ರ ಅಶ್ವಿನ್ ರಾವ್ ಅವರು ತಮಗೆ ಬೆದರಿಕೆ ಹಾಕಿ ಒಂದು ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿ ಬೆಂಗಳೂರಿನ ಜಿಲ್ಲಾ ಪಂಚಾಯತ್ ನ ಲೋಖೋಪಯೋಗಿ ಇಲಾಖೆಯ ಎಂಜಿನಿಯರ್ ಕೃಷ್ಣಮೂರ್ತಿ ಎಂಬುವವರು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದರು. ಆದರೆ ಪ್ರಕರಣವು ಇಲಾಖೆಯಲ್ಲಿಯೇ ನಡೆದಿದ್ದು, ಅದೇ ಸಂಸ್ಥೆಯ ಅಧಿಕಾರಿಗಳು ತನಿಖೆ ನಡೆಸುವುದು ಸರಿಯಲ್ಲ ಎಂಬ ಕಾರಣದಿಂದ ಸರ್ಕಾರವು ಎಡಿಜಿಪಿ ಕಮಲ್ ಪಂತ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಆದರೆ ಈ ತಂಡ ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿ ಪ್ರಸ್ತುತ ಹಿರೇಮಠ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.  

ವೆಬ್ದುನಿಯಾವನ್ನು ಓದಿ