ಲೋಕಾಯುಕ್ತರ ರಾಜೀನಾಮೆಗೆ ಒತ್ತಾಯಿಸಿ ವಕೀಲರ ಪ್ರತಿಭಟನೆ

ಬುಧವಾರ, 1 ಜುಲೈ 2015 (12:37 IST)
ರಾಜ್ಯ ಲೋಕಾಯುಕ್ತ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯ ಲೋಕಾಯುಕ್ತ ನ್ಯಾ. ಭಾಸ್ಕರ್ ರಾವ್ ಅವರು ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ರಾಜ್ಯ ವಕೀಲರ ಸಂಘದ ಸದಸ್ಯರು ನಗರದಲ್ಲಿ ಇಂದು ಪ್ರತಿಭಟನೆ ನಡೆಸುತ್ತಿದ್ದಾರೆ. 
 
ಈ ಪ್ರತಿಭಟನೆಯು ನಗರದ ಎಂ.ಎಸ್ ಬಿಲ್ಡಿಂಗ್‌ನಲ್ಲಿರುವ ಲೋಕಾಯುಕ್ತರ ಕಚೇರಿ ಎದುರು ವಕೀಲರ ಸಂಘದ ಮಾಜಿ ಅಧ್ಯಕ್ಷ ಸುಬ್ಬಾರೆಡ್ಡಿ ನೇತೃತ್ವದಲ್ಲಿ ನಡೆಯುತ್ತಿದ್ದು, ರಾಜ್ಯದ ಸಾವಿರಾರು ವಕೀಲರು ಭಾಗಿಯಾಗಿದ್ದಾರೆ. ಪ್ರತಿಭಟನೆಯಲ್ಲಿ ಬೇಕೇ ಬೇಕು ಸಿಬಿಐ ತನಿಖೆ ಆಗಲೇಬೇಕು, ತೊಲಗಲಿ ತೊಲಗಲಿ ಭಾಸ್ಕರ್ ರಾವ್ ತೊಲಗಲಿ, ಉಳಿಸಿ ಉಳಿಸಿ ಲೋಕಾಯುಕ್ತ ಉಳಿಸಿ ಹೀಗೆ ನ್ಯಾ. ಭಾಸ್ಕರ್ ರಾವ್ ಅವರ ವಿರುದ್ಧ ನಾನಾ ರೀತಿಯ ಧಿಕ್ಕಾರಗಳನ್ನು ಕೂಗುತ್ತಿರುವ ವಕೀಲರು, ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. 
 
ಇದೇ ವೇಳೆ, ಪ್ರತಿಭಟನಾನಿರತ ವಕೀಲರು, ಲೋಕಾಯುಕ್ತ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ ಇದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಇದರಿಂದ ಕುಪಿತಗೊಂಡ ವಕೀಲರು, ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ಈ ವೇಳೆ ಮಾತಿಗೆ ಮಾತು ಬೆಳೆದು ಪೊಲೀಸರು ಹಾಗೂ ವಕೀಲರ ನಡುವೆ ಮಾತಿನ ಚಕಮಕಿ ಏರ್ಪಟ್ಟಿತು. ಪ್ರತಿಭಟನೆ ಹಿನ್ನೆಲೆಯಲ್ಲಿ ಮೂರು ಕೆಎಸ್ಆರ್ಪಿ ತುಕಡಿಗಳನ್ನು ನೇಮಿಸಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.   
 
ಇನ್ನು ಮೈಸೂರು ನಗದರಲ್ಲಿಯೂ ಕೂಡ ಭಾಸ್ಕರ್ ರಾವ್ ಅವರ ರಾಜೀನಾಮೆಗೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ನಗರದ ದೇವರಾಜ್ ವೃತ್ತದಲ್ಲಿನ ಲೋಕಾಯುಕ್ತ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಇಲ್ಲಿಯೂ ಕೂಡ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. 
 
ಪ್ರಕರಣದ ಹಿನ್ನೆಲೆ: ಲೋಕಾಯುಕ್ತ ಇಲಾಖೆಯ ಅಧಿಕಾರಿಗಳೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದು, ಒಂದು ಕೋಟಿ ಲಂಚ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತನಿಖೆ ಮುಂದುವರಿಸಿದ್ದ ಬೆಂಗಳೂರು ಲೋಕಾಯುಕ್ತ ಎಸ್‌ಪಿ ಸೋನಿಯಾ ನಾರಂಗ್ ಅವರು ಈ ಪ್ರಕರಣದ ತನಿಖೆ ನಡೆಸುತ್ತಿದ್ದರು. ಆದರೆ ಅವರ ತನಿಖೆಗೆ ರಾಜ್ಯದ ಮುಖ್ಯ ಲೋಕಾಯುಕ್ತ ನ್ಯಾ.ವೈ.ಭಾಸ್ಕರ್ ರಾವ್ ಅವರು ತಡೆ ನೀಡಿ ಪ್ರಕರಣವನ್ನು ತಮ್ಮ ಸ್ವಂತ ಅಧಿಕಾರ ಬಳಸಿ ಸಿಸಿಬಿಗೆ ವಹಿಸಿದ್ದರು. 
 
ಈ ಸಂಬಂಧ ಪ್ರತಿಕ್ರಿಯಿಸಿದ್ದ ರಾಜ್ಯದ ಉಪ ಲೋಕಾಯುಕ್ತ ಸುಭಾಷ್ ಬಿ. ಅಡಿ ಅವರು, ಭ್ರಷ್ಟಾಚಾರದ ಪ್ರಕರಣಗಳನ್ನು ತನಿಖೆ ನಡೆಸುವ ಅಧಿಕಾರ ಸಿಸಿಬಿಗೆ ಇದೆಯೇ ಎಂಬ ಬಗ್ಗೆ ನನಗೆ ತಿಳಿದಿಲ್ಲ. ಆದರೆ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸುತ್ತಿರುವಾಗಿ ಮುಖ್ಯ ಲೋಕಾಯುಕ್ತರು ತಮ್ಮ ಬಳಿ ಸಲಹೆ ಪಡೆದಿಲ್ಲ ಎಂದು ಆರೋಪಿಸಿದ್ದರು. ಇದು ಲೋಕಾಯುಕ್ತ ಇಲಾಖೆ ಹಾಗೂ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಈ ಹಿನ್ನೆಲೆಯಲ್ಲಿ ಸ್ವಯಂ ನಿರ್ಧಾರ ಕೈಗೊಂಡಿರುವ ರಾಜ್ಯ ಸರ್ಕಾರ, ವಿಶೇಷ ತನಿಖಾ ತಂಡ ರಚಿಸಿ ಪ್ರಕರಣವನ್ನು ವರ್ಗಾಯಿಸಿದೆ. ಈ ಹಿನ್ನೆಲೆಯಲ್ಲಿ ವಕೀಲರು ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ.  
 
ಇನ್ನು ಪ್ರಕರಣದಲ್ಲಿ ಲೋಕಾಯುಕ್ತ ಇಲಾಖೆಯ ಜಂಟಿ ಆಯುಕ್ತ ರಿಯಾಜ್, ಲೋಕಾಯುಕ್ತ ನ್ಯಾ.ವೈ.ಭಾಸ್ಕರ್ ರಾವ್ ಅವರ ಪುತ್ರ ಅಶ್ವಿನ್ ರಾವ್ ಹಾಗೂ ಅವರ ಸಂಬಂಧಿ ಆಂಧ್ರ ಮೂಲದ ಕೃಷ್ಣ ರಾವ್ ಅಲಿಯಾಸ್ ನರಸಿಂಹ ರಾವ್ ಅವರು ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. 

ವೆಬ್ದುನಿಯಾವನ್ನು ಓದಿ