ನಾಯಕರು ನಮ್ಮ ಮೇಲೆ ಚಪ್ಪಲಿ ಎಸೆದಿದ್ದಾರೆ: ಯಾದವ್ ಆರೋಪ

ಶನಿವಾರ, 28 ಮಾರ್ಚ್ 2015 (14:05 IST)
ಎಎಪಿ ಪಕ್ಷದ ಸಂಸ್ಥಾಪಕ ಸದಸ್ಯರಾಗಿದ್ದ ಯೋಗೇಂದ್ರ ಯಾದವ್ ಅವರು ಪಕ್ಷದಿಂದ ಉಚ್ಛಾಟನೆಗೊಳ್ಳುತ್ತಿದ್ದಂತೆ ಹೈಡ್ರಾಮಾವೊಂದನ್ನು ಸೃಷ್ಟಿಸಿದ್ದು, ಎಎಪಿ ನಾಯಕರು ನಮ್ಮ ಮೇಲೆ ಚಪ್ಪಲಿ ಎಸೆದಿದ್ದಾರೆ ಎಂದು ಆರೋಪಿಸಿದ್ದಾರೆ.  
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾರ್ಯಕಾರಿಣಿ ಸಭೆ ನಡೆಯುತ್ತಿತ್ತು. ನಮ್ಮ ಬೆಂಬಲಿಗರು ನಮ್ಮ ಉಚ್ಛಾಟನೆ ಸಲ್ಲದು ಎಂದು ಸ್ವಲ್ಪ ಗದ್ದಲ ನಿರ್ಮಿಸಿದರು. ಈ ವೇಳೆ ಗದ್ದಲವೇ ಗಲಾಟೆಯಾಗಿ ಪರಿಣಮಿಸಿತು. ಬಳಿಕ ಆ ನಡುವೆಯೂ ನಮ್ಮ ಉಚ್ಛಾಟನಾ ನಿರ್ಣಯವನ್ನು ನಾಯಕರು ಮಂಡಿಸಿದರು. ಆದರೆ ಈ ವೇಳೆ ನಮ್ಮ ಹಾಗೂ ನಮ್ಮ ಬೆಂಬಲಿಗರ ಮೇಲೆ ಎಎಪಿ ನಾಯಕರು ಚಪ್ಪಲಿ ಎಸೆದು ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದ ಅವರು, ಪಕ್ಷದ ಮತ್ತೋರ್ವ ನಾಯಕ ರಮ್ಜಾನ್ ಚೌದರಿ ಅವರ ಮೇಲೂ ಚಪ್ಪಲಿ ಎಸೆಯಲಾಗಿದೆ ಎಂದರು.  
 
ಬಳಿಕ ಮಾತನಾಡಿದ ಅವರು, ಈ ಕೃತ್ಯವನ್ನು ವ್ಯವಸ್ಥಿತವಾಗಿ ಎಸಗಲು ಪಕ್ಷದ ನಾಯಕರು ಹೊರಗಿನಿಂದ ಕೆಲ ಗೂಂಡಾಗಳನ್ನು ಕರೆ ತಂದಿದ್ದರು. ಅಲ್ಲದೆ ಪಕ್ಷದಲ್ಲಿನ ಕೆಲ ಶಾಸಕರೇ ಗೂಂಡಾಗಳಂತೆ ವರ್ತಿಸಿದರು. ಇದೆಲ್ಲವೂ ಕೂಡ ರಾಜಕೀಯ ಪಿತೂರಿಯಾಗಿದ್ದು, ಸಭೆಯಲ್ಲಿ ಪ್ರಜಾಪ್ರಭುತ್ವದ ಕಗ್ಗೋಲೆಯಾಗಿದೆ ಎಂದರು. 
 
ಇನ್ನು ಯೋಗೇಂದ್ರ ಯಾದವ್ ಅವರ ಈ ಹೇಳಿಕೆಗೆ ಸಂಬಂಧಿಸಿದಂತೆ ಎಎಪಿಯ ನಾಯಕ ಅಶುತೋಷ್ ಪ್ರತಿಕ್ರಿಯಿಸಿದ್ದು, ಯಾದವ್ ಸುಳ್ಳು ಹೇಳುತ್ತಿದ್ದಾರೆ. ಅವರು ಪಕ್ಷವನ್ನು ಗೌರವಿಸಲಿ ಎಂದು ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿದ್ದಾರೆ. 

ವೆಬ್ದುನಿಯಾವನ್ನು ಓದಿ