ಉಪನ್ಯಾಸಕಿ ಕೊಲೆ ಪ್ರಕರಣ: ವಿದ್ಯಾರ್ಥಿ ಬಂಧನ

ಮಂಗಳವಾರ, 3 ಮೇ 2016 (15:37 IST)
ಲಿಂಗಸೂಗೂರಿನ ಖಾಸಗಿ ಕಾಲೇಜು ಉಪನ್ಯಾಸಕಿ ಫರಜಹಾನ್ ಬೇಗಂ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ವೀರೇಶ್ ಶೆಟ್ಟಿ ಎಂದು ಗುರುತಿಸಲಾಗಿದ್ದು ಆತ ಮೃತಳ ವಿದ್ಯಾರ್ಥಿ ಎಂದು ಹೇಳಲಾಗುತ್ತಿದೆ. 
 
ಏಪ್ರಿಲ್‌ 14ರಂದು ಉಪನ್ಯಾಸಕಿ ನಾಪತ್ತೆಯಾಗಿದ್ದಳು. ಹಟ್ಟಿಯಿಂದ ಕಾಲೇಜಿಗೆ ತೆರಳಿದ್ದ ಉಪನ್ಯಾಸಕಿ ಫರಜಹಾನ್ ಬೇಗಂ (26) ಅಂದು ಮನೆಗೆ ಹಿಂತಿರುಗಿರಲಿಲ್ಲ. ನಾಪತ್ತೆಯಾದ 8 ದಿನಗಳ ಬಳಿಕ ಅಂದರೆ ಏಪ್ರಿಲ್ 22 ರಂದು ಮಾನವಿ ತಾಲೂಕಿನ ಸಿರವಾರದ ಬಳಿಯ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಆಕೆ ಶವವಾಗಿ ಪತ್ತೆಯಾಗಿದ್ದಳು. ಆಕೆಯ ಶವವನ್ನು ಮೂಟೆ ಕಟ್ಟಿ ಎಸೆಯಲಾಗಿತ್ತು. 
 
ಪ್ರಕರಣ ದಾಖಲಿಸಿಕೊಂಡಿದ್ದ ಸಿರವಾರ ಪೊಲೀಸರಿಗೆ ಇದು ಸವಾಲಾಗಿ ಕಾಡಿತ್ತು. ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. 
 
ತನ್ನ ಉಪನ್ಯಾಸಕಿ ಫರಜಹಾನ್‌‌ನನ್ನು ಪ್ರೀತಿಸುತ್ತಿದ್ದ ಆರೋಪಿ ವಿರೇಶ್ ಶೆಟ್ಟಿ ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದ್ದ ಎನ್ನಲಾಗಿದೆ. ಆ ಫರಜಹಾನ್‌‌ ಮದುವೆಗೆ ನಿರಾಕರಿಸಿದ್ದು ಇತ್ತೀಚಿಗೆ ಬೇರೊಬ್ಬರ ಜತೆಗೆ ಅವಳ ನಿಶ್ಚಿತಾರ್ಥವಾಗಿತ್ತು. ತನಗೆ ಸಿಗದವಳು ಯಾರಿಗೂ ಸಿಗಬಾರೆಂದು ನಿರ್ಧರಿಸಿದ ಆತ ಆಕೆಯನ್ನು ಅಪಹರಿಸಿ ಕೊಂದಿದ್ದಾನೆ ಎಂದು ಹೇಳಲಾಗುತ್ತಿದೆ. ತನಿಖೆಯ ಬಳಿಕವಷ್ಟೇ ಪ್ರಕರಣದ ಸತ್ಯಾಸತ್ಯತೆ ಹೊರಬೀಳಲಿದೆ. 

ವೆಬ್ದುನಿಯಾವನ್ನು ಓದಿ