ವಿಬ್ ಗಯಾರ್ ಶಾಲೆ ಬಳಿ ಸೆರೆ ಹಿಡಿದಿದ್ದ ಚಿರತೆ ಪರಾರಿ

ಸೋಮವಾರ, 15 ಫೆಬ್ರವರಿ 2016 (10:34 IST)
ವಿಬ್ ಗಯಾರ್ ಶಾಲೆಯ ಆವರಣವನ್ನು ಪ್ರವೇಶಿಸಿ ಆತಂಕವನ್ನು ಸೃಷ್ಟಿಸಿ 10 ಗಂಟೆಗಳ ಸತತ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಲಾಗಿದ್ದ ಚಿರತೆ ಬೋನಿನಿಂದ ತಪ್ಪಿಸಿಕೊಂಡಿದೆ ಎಂದು ತಿಳಿದು ಬಂದಿದೆ.

ಚಿರತೆಯನ್ನು ಬನ್ನೇರು ಘಟ್ಟ ಜೈವಿಕ ಉದ್ಯಾನವನದಲ್ಲಿ ಇರಿಸಲಾಗಿತ್ತು. ನಿನ್ನೆ ತಡರಾತ್ರಿ ಅದು ನಾಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಆದರೆ ಅದು ಹೇಗೆ ತಪ್ಪಿಸಿಕೊಂಡಿತು ಎಂಬ ಬಗ್ಗೆ ಯಾರಲ್ಲಿಯೂ ಉತ್ತರವಿಲ್ಲ. ಅಪಾಯಕಾರಿ ಚಿರತೆಗೆ ಬಲಗಣ್ಣು ಸರಿ ಇರಲಿಲ್ಲ, ಸ್ವಲ್ಪ ಮಂಜಾಗಿದೆ, ಒಂದು ಕೋರೆ ಹಲ್ಲು ಸಹ ಇಲ್ಲ ಎಂಬುದು ಕಾರ್ಯಾಚರಣೆ ಸಂದರ್ಭದಲ್ಲಿ ಕಂಡು ಬಂದಿತ್ತು. ಆದರೆ ಅದು ಬೇಟೆ ಮಾಡುವಷ್ಟು ಸಮರ್ಥವಾಗಿದ್ದು ತಪ್ಪಿಸಿಕೊಂಡು ಹೋಗಿರುವುದು ಆತಂಕವನ್ನು ಸೃಷ್ಟಿಸಿದೆ. 
 
ಕಳೆದ ಕೆಲ ದಿನಗಳ ಹಿಂದೆ ವರ್ತೂರು ಬಳಿ ಇರುವ ವಿಬ್ ಗಯಾರ್ ಶಾಲೆಗೆ ನುಗ್ಗಿದ್ದ ಚಿರತೆ ಹಲವರನ್ನು ಗಾಯಗೊಳಿಸಿತ್ತು. ಫೆಬ್ರವರಿ 7 ರಂದು ಅದನ್ನು ಸೆರೆ ಹಿಡಿಯಲಾಗಿತ್ತು. ಶಾಲೆಗೆ ಅಂದು ರಜೆ ಇದ್ದ ನಿಮಿತ್ತ ಮಕ್ಕಳು ಅಪಾಯದಿಂದ ಪಾರಾಗಿದ್ದರು. ನಿನ್ನೆ ರಾತ್ರಿ ಊಟ ಕೊಡಲು ಹೋಗಿದ್ದಾಗ ಇದ್ದ ಚಿರತೆ ಇಂದು ಬೆಳಿಗ್ಗೆ ವೈದ್ಯರು ತಪಾಸಣೆಗೆ ಹೋದ ಸಂದರ್ಭದಲ್ಲಿ ಬೋನಿನಲ್ಲಿ ಇರಲಿಲ್ಲ ಎಂದು ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
 
ಅಷ್ಟೊಂದು ಅಪಾಯಕಾರಿಯಾದ ಚಿರತೆ ತಪ್ಪಿಸಿಕೊಳ್ಳುವವರೆಗೆ ಯಾರು ಗಮನಿಸಲಿಲ್ಲವೇ? ಎಂಬ ಪ್ರಶ್ನೆ ಎದ್ದಿದೆ. 

ವೆಬ್ದುನಿಯಾವನ್ನು ಓದಿ