ಚಾಕು ತೋರಿಸಿ ದರೋಡೆಗೆ ಯತ್ನಿಸಿದ ಗುಂಪಿಗೆ ಧರ್ಮದೇಟು ನೀಡಿದ ಸ್ಥಳೀಯರು

ಬುಧವಾರ, 17 ಫೆಬ್ರವರಿ 2016 (13:17 IST)
ಬೆಂಗಳೂರಿನ ಆನೇಕಲ್ ತಾಲೂಕಿನ ರಾಗಿಹಳ್ಳಿಯಲ್ಲಿ ಚಾಕು ತೋರಿಸಿ ದರೋಡೆಗೆ ಯತ್ನಿಸುತ್ತಿದ್ದ ಗುಂಪನ್ನು ಸ್ಥಳೀಯರು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ. ಮೂವರು ಆರೋಪಿಗಳಲ್ಲಿ ಓರ್ವ ಆರೋಪಿ ಪರಾರಿಯಾಗಿದ್ದು, ಇನ್ನಿಬ್ಬರು ಆರೋಪಿಗಳನ್ನು ಹಿಡಿದು ಸ್ಥಳೀಯರು ಚೆನ್ನಾಗಿ ತದುಕಿದರು.

 ಆರೋಪಿಗಳು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪ್ರೇಮಿಗಳನ್ನು ಬೆದರಿಸಿ ಚಾಕು ತೋರಿಸಿ ಅವರಿಂದ 3 ಸಾವಿರ ರೂ. ಹಣ, ಮೊಬೈಲ್ ಮುಂತಾದುವನ್ನು ಕಸಿದುಕೊಂಡು ಪಲ್ಸರ್ ಬೈಕ್‌ನಲ್ಲಿ ಪರಾರಿಯಾಗುತ್ತಿದ್ದರು.  ಸ್ಥಳೀಯರಿಗೆ ಈ ವಿಷಯ ತಿಳಿದು ಚೆಕ್ ಪೋಸ್ಟ್ ನಲ್ಲಿದ್ದ   ಸ್ನೇಹಿತರಿಗೆ ಕರೆ ಮಾಡಿದ ಬಳಿಕ ಅಲ್ಲಿದ್ದವರು ದರೋಡೆಕೋರರನ್ನು ಅಡ್ಡಗಟ್ಟಿ ಬೈಕ್ ಮೈಮೇಲೆ ಹತ್ತಿಸಲು ಯತ್ನಿಸಿದ್ದರು. ಕಡೆಗೂ ಹರಸಾಹಸ ಮಾಡಿ ಅವರನ್ನು ಹಿಡಿದ ಜನರು ದರೋಡೆಕೋರರಿಗೆ ಚೆನ್ನಾಗಿ ತದುಕಿದರು. 

 ದರೋಡೆಕೋರರು ಸುಲಿಗೆ ಮಾಡಿದ ನಂತರ ಹಾರೋಹಳ್ಳಿ ರಸ್ತೆ ಮೂಲಕ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆದರೆ ಸ್ಥಳೀಯರ ಸಮಯಪ್ರಜ್ಞೆಯಿಂದ ಅವರು ಸಿಕ್ಕಿಬಿದ್ದಿದ್ದರು. ಒಬ್ಬ ಆರೋಪಿ ಸ್ಥಳೀಯರ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಬನ್ನೇರುಘಟ್ಟ ಪೊಲೀಸರಿಗೆ ಕರೆ ಮಾಡಿದ ಬಳಿಕ ಪೊಲೀಸರು ಇನ್ನಿಬ್ಬರನ್ನು  ಬಂಧಿಸಿ ಕರೆದೊಯ್ದರು. ಆರೋಪಿಗಳ ಬಳಿಯಿರುವ ಪಲ್ಸರ್ ಬೈಕ್ ಕದ್ದಿರುವುದೇ ಮತ್ತು ಅವರು ಬೇರೆ ಕಡೆಗಳಲ್ಲಿ ದರೋಡೆ ಮಾಡಿದ ಮಾಹಿತಿಗಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ