'ಲೋಕಾ' ಭ್ರಷ್ಟಾಚಾರ ಪ್ರಕರಣ: 420 ವಿ.ಭಾಸ್ಕರ್ ಬಂಧಿಸಿದ ಎಸ್ಐಟಿ ಅಧಿಕಾರಿಗಳು

ಬುಧವಾರ, 5 ಆಗಸ್ಟ್ 2015 (14:02 IST)
ಲೋಕಾಯುಕ್ತ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಸಂಭಾಷಣೆಯ ಮೂಲಕ ಹಲವು ವಿಚಾರಗಳನ್ನು ಬಹಿರಂಗಗೊಳಿಸಿದ್ದ ಆರೋಪಿ ವಿ.ಭಾಸ್ಕರ್ ಅಲಿಯಾಸ್ 420 ಭಾಸ್ಕರ್‌ನನ್ನು ಇಂದು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.  
 
ಪ್ರಕರಣದಲ್ಲಿ ಯಾರೆಲ್ಲಾ ಭಾಗಿಯಾಗಿದ್ದು, ಯಾವ ರೀತಿಯ ಸಂಪರ್ಕಕೊಂಡಿ ಬೆಳೆದುಕೊಂಡಿದೆ ಎಂಬ ವಿಚಾರವನ್ನು ತನ್ನದೇ ದಾಟಿಯಲ್ಲಿ ಮಾತನಾಡುವ ಮೂಲಕ ಬಹಿರಂಗಗೊಳಿಸಿದ್ದ ವ್ಯಕ್ತಿ ವಿ.ಭಾಸ್ಕರ್. ಈತ ರಾಜ್ಯದ ಮುಖ್ಯ ಲೋಕಾಯುಕ್ತ ನ್ಯಾ.ವೈಭಾಸ್ಕರ್ ರಾವ್ ಅವರ ಪರಿಚಯಸ್ಥ ಎಂದು ಹೇಳಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಇಂದು ಆತನನ್ನು ಬಂಧಿಸಿದ್ದಾರೆ. ಅಲ್ಲದೆ ಇಂದು ಸಂಜೆ ವೇಳೆಗೆ ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
 
ಈತ ತಮ್ಮ ಆಪ್ತ ವಕೀಲರೋರ್ವರ ಜೊತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಭಾಷಣೆ ನಡೆಸುತ್ತಿದ್ದ. ಈ ವೇಳೆ ಸಂಭಾಷಣೆ ನಡೆಸುತ್ತಿದ್ದ ವಕೀಲರು, ಭಾಸ್ಕರ್‌ನ ಎಲ್ಲಾ ಸಂಭಾಷಣೆಯನ್ನು ತಮ್ಮ ಮೊಬೈಲ್‌ ಉಪಕರಣದಲ್ಲಿ ದಾಖಲಿಸಿಕೊಂಡಿದ್ದರು. ಬಳಿಕ ಆ ಧ್ವನಿ ಸುರುಳಿಯನ್ನು ಮಾಧ್ಯಮಗಳೆದುರು ಬಹಿರಂಗಗೊಳಿಸಿದ್ದರು. ಇದರ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ.
 
ಇನ್ನು ಸಂಭಾಷಣೆಯಲ್ಲಿ ನ್ಯಾ.ವೈ.ಭಾಸ್ಕರ್ ರಾವ್ ಮತ್ತು ಅವರ ಪುತ್ರ ಹಾಗೂ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ತಾನೂ ದೆಹಲಿಗೆ ವಿಮಾನದಲ್ಲಿ ತೆರಳಿದ್ದೆ ಎಂಬ ವಿಚಾರವೂ ಸೇರಿದಂತೆ ಅಶ್ವಿನ್ ರಾವ್ ಹಾಗೂ ಲೋಕಾಯುಕ್ತ ಎಸ್ ಪಿ ಸೋನಿಯಾ ನಾರಂಗ್ ಸೇರಿದಂತೆ ಇತರರ ಬಗ್ಗೆ ಕೆಲ ರಹಸ್ಯ ವಿಚಾರಗಳನ್ನು ಬಹಿರಂಗಗೊಳಿಸಿದ್ದ.

ವೆಬ್ದುನಿಯಾವನ್ನು ಓದಿ