ಲೋಕಾಯುಕ್ತ ಪೊಲೀಸರಿಗೆ ಭಾರಿ ಭ್ರಷ್ಟ ತಿಮಿಂಗಿಲ ವಶಕ್ಕೆ

ಭಾನುವಾರ, 28 ಸೆಪ್ಟಂಬರ್ 2014 (13:49 IST)
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಹಾಸನ ವಿಭಾಗೀಯ ಕಚೇರಿ ಹಾಗೂ ವಸತಿಗೃಹದ ಮೇಲೆ ಮಧ್ಯಾಹ್ನ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಒಟ್ಟು 4.35 ರೂ. ಲಕ್ಷ ವಶಪಡಿಸಿಕೊಂಡು ವಿಭಾಗೀಯ ನಿಯಂತ್ರಣಾಧಿಕಾರಿ ವೆಂಕಟೇಶ್ವರ ರೆಡ್ಡಿ ಅವರನ್ನು ಬಂಧಿಸಿದ್ದಾರೆ.
 
ಲೋಕಾಯುಕ್ತ ಎಸ್‌ಪಿ ಡಾ.ವೇದಮೂರ್ತಿ ನೇತೃತ್ವದ ತಂಡ ಮೊದಲು ಬಿ.ಎಂ. ರಸ್ತೆಯಲ್ಲಿರುವ ಕೆಎಸ್ಆರ್‌ಟಿಸಿ ವಿಭಾಗೀಯ ಕಚೇರಿ ಮೇಲೆ ದಾಳಿ ನಡೆಸಿತು. ಅಲ್ಲಿಂದ 55 ಸಾವಿರ ವಶಕ್ಕೆ ತೆಗೆದುಕೊಂಡು ರೆಡ್ಡಿ ಅವರನ್ನು ಬಂಧಿಸಲಾಗಿತ್ತು. ಇದಾದ ಬಳಿಕ ವೆಂಕಟೇಶ್ವರ ರೆಡ್ಡಿ ಅವರು ಉಳಿದುಕೊಂಡಿರುವ ಅತಿಥಿಗೃಹದ ಕೊಠಡಿಯ ತಪಾಸಣೆ ನಡೆಸಿದಾಗ ಅಲ್ಲಿ 3 ಲಕ್ಷ ನಗದು ಲಭಿಸಿತ್ತು. ಇದಲ್ಲದೆ ಅವರ ಕಾರಿನಿಂದಲೂ 80 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.
 
‘ಎಂಟು ತಿಂಗಳ ಹಿಂದೆ ಇಲ್ಲಿಗೆ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ನೇಮಕಗೊಂಡಿದ್ದ ರೆಡ್ಡಿ, ಚಾಲಕರು ಮತ್ತು ನಿರ್ವಾಹಕರಿಂದಲೇ ಲಂಚದ ಬೇಡಿಕೆ ಇಡುತ್ತಿದ್ದರು ಎಂಬ ದೂರು ಬಂದ ಕಾರಣ ದಾಳಿ ನಡೆಸಿದ್ದೇವೆ’ ಎಂದು ಲೋಕಾಯುಕ್ತ ಎಸ್‌ಪಿ ಡಾ.ವೇದಮೂರ್ತಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ