ಬಿಜೆಪಿ ಶಾಸಕನ ವಿರುದ್ಧ ಎಫ್‌ಐಆರ್ ದಾಖಲಿಸಿದ ಲೋಕಾಯುಕ್ತ ಪೊಲೀಸ್

ಬುಧವಾರ, 30 ಜುಲೈ 2014 (13:01 IST)
ಅಕ್ರಮ ಡಿನೋಟಿಫಿಕೇಶನ್ ಪ್ರಕರಣ ಸಂಬಂಧ ಮಾಜಿ ಸಚಿವ ಹಾಗೂ ಹಾಲಿ ಬಿಜೆಪಿ ಶಾಸಕ ಸಿ.ಟಿ.ರವಿ ಸೇರಿದಂತೆ ಮೂವರ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಇದರಿಂದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಸಿ.ಟಿ.ರವಿಗೆ ಭಾರಿ ಹಿನ್ನಡೆಯಾದಂತಾಗಿದೆ.
 
ಸಿ.ಟಿ.ರವಿ ಅವರು ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ವೇಳೆ ಸುದರ್ಶನ್ ಎಂಬುವವರೊಂದಿಗೆ ಸೇರಿಕೊಂಡು ಹಿರೇಮಗಳೂರಿನ ಸವೇಂ ನಂಬರ್ 19ರಲ್ಲಿ 6.3ಗುಂಟೆ ಜಮೀನನನ್ನು ಡಿನೋಟಿಫಿಕೇಶನ್ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿ ಚಿಕ್ಕಮಗಳೂರಿನ ಗೃಹ ಮಂಡಳಿಯ ನಿವಾಸಿ ಕೆ.ಎನ್.ಸಣ್ಣಮಲ್ಲಪ್ಪ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.
 
ದೂರಿನ ವಿಚಾರಣೆ ನಡೆಸಿದ್ದ ಸೆಷನ್ಸ್ ಕೋರ್ಟ್, ಪ್ರಕರಣದ ತನಿಖೆ ನಡೆಸಿ ಆರು ತಿಂಗಳೊಳಗೆ ವರದಿ ನೀಡುವಂತೆ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು.
 
ಸಿ.ಟಿ.ರವಿ ಹಾಗೂ ಸುದರ್ಶನ್ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು, ಆಗಿನ ಚಿಕ್ಕಮಗಳೂರು ನಗರಾಭಿವೃದ್ಧಿ ಆಯುಕ್ತ ನಾಗಭೂಷಣ್ ಅವರ ಮೂಲಕ ಅಕ್ರಮವಾಗಿ ಭೂ ಪರಿವರ್ತನೆ ಮಾಡಿ, ನಿವೇಶನಗಳನ್ನು ಮಾರಾಟ ಮಾಡಿದ ಆರೋಪದ ಮೇಲೆ ಈ ಮೂವರ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
 
ಈ ಮೂವರು ಸರ್ಕಾರ ಮತ್ತು ಕಂದಾಯ ಇಲಾಖೆ ಗಮನಕ್ಕೆ ತಾರದೆ ಸುಮಾರು 14 ಕೋಟಿ ರೂ. ನಷ್ಟ ಉಂಟು ಮಾಡಿದ್ದಾರೆಂದು ಐಪಿಸಿ ಸೆಕ್ಷನ್ 406, 409, 420, 426, 469, 468, 471, 474 ಮತ್ತು 120 (ಬಿ) ಅಡಿ ಪ್ರಕರಣ ದಾಖಲಿಸಿಕೊಂಡು ಲೋಕಾಯುಕ್ತ ಇನ್ಸ್‌ಪೆಕ್ಟರ್ ಸಂಪತ್ ನ್ಯಾಯಾಲಯಕ್ಕೆ ಎಫ್‌ಐಆರ್ ಸಲ್ಲಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ