ಭ್ರಷ್ಟ ತಿಮಿಂಗಲ ಅಧಿಕಾರಿಗಳಿಂದ ಕೋಟಿ ಕೋಟಿ ಹಣ ವಶಕ್ಕೆ

ಮಂಗಳವಾರ, 26 ಆಗಸ್ಟ್ 2014 (16:33 IST)
ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಆರು ಜಿಲ್ಲೆಗಳಲ್ಲಿ ಮಂಗಳವಾರ ಬೆಳ್ಳಂಬೆಳಿಗ್ಗೆಯೇ ಏಕಕಾಲಕ್ಕೆ ದಾಳಿ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು, ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
 
ಅಕ್ರಮ ಆಸ್ತಿ ಗಳಿಗೆ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರು ನಗರ, ಕೋಲಾರ, ಮೈಸೂರು, ಶಿವಮೊಗ್ಗ, ಗುಲ್ಬರ್ಗಾ ಹಾಗೂ ಯಾದಗಿರಿ ಜಿಲ್ಲೆಯ ಐವರು ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
 
ಲೋಕಾಯುಕ್ತ ಡಿವೈಎಸ್‌ಪಿ ಅಮರೇಶ್ ಬಾರಕೇರ್ ನೇತೃತ್ವದಲ್ಲಿ ಬೆಂಗಳೂರಿನ ಬಸವೇಶ್ವರ ಲೇಔಟ್‌ನಲ್ಲಿರುವ ನಗರಾಭಿವೃದ್ಧಿ ಇಲಾಖೆ ಎಇಇ ಸೀತಾರಾಮ್ ಅವರ ನಿವಾಸ ಹಾಗೂ ಹಲಸೂರು ಗೇಟ್ ಬಳಿ ಇರುವ ಕಚೇರಿಯ ಮೇಲೆ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
 
ಮೈಸೂರಿನಲ್ಲಿ ಲೋಕಾಯುಕ್ತ ಎಸ್‌ಪಿ ಜಗದೀಶ್ ಪ್ರಸಾದ್ ಅವರ ನೇತೃತ್ವದಲ್ಲಿ ಮಕ್ಕಳ ಅಭಿವೃದ್ಧಿ ಅಧಿಕಾರಿ ರಾಮಕೃಷ್ಣ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿದ್ದು, ಅಕ್ರಮ ಆಸ್ತಿಗೆ ಸಂಬಂಧಿಸಿದ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
 
ಕೋಲಾರ ನಗರ ಸಭೆ ಆಯುಕ್ತ ಜಗದೀಶ್ ಅವರ ನಿವಾಸದ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಎಸ್‌ಪಿ ಸುಬ್ರಮಣಿ ಅವರ ನೇತೃತ್ವದ ತಂಡ, ಮಹತ್ವದ ದಾಖಲೆಗಳನ್ನು ಪರಿಶೀಲಿಸುತ್ತಿದೆ.

ವೆಬ್ದುನಿಯಾವನ್ನು ಓದಿ