ಲೋಕಾಯುಕ್ತರ ಪದಚ್ಯುತಿ ವಿಚಾರ: ಪ್ರತಿಪಕ್ಷಗಳಿಂದ ಸಹಿ ಸಲ್ಲಿಕೆ

ಶುಕ್ರವಾರ, 3 ಜುಲೈ 2015 (13:19 IST)
ಲೋಕಾಯುಕ್ತ ಇಲಾಖೆಯಲ್ಲಿಯೇ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯ ಲೋಕಾಯುಕ್ತರನ್ನು ಲೋಕಾಯುಕ್ತ ಪದವಿಯಿಂದ ಪದಚ್ಯುತಗೊಳಿಸಬೇಕು ಎಂಬ ಕಾರಣದಿಂದ ರಾಜ್ಯ ವಿಧಾನಸಭೆಯ ವಿರೋಧ ಪಕ್ಷಗಳ ನಾಯಕರು ಜನಪ್ರತಿನಿಧಿಗಳ ಸಹಿ ಸಂಗ್ರಹ ಮಾಡಿ ವಿಧಾನಸಭಾಧ್ಯಕ್ಷರಿಗೆ ಸಲ್ಲಿಕೆ ಮಾಡಿದ್ದು, ವಿಶೇಷ ಚರ್ಚೆಗೆ ಅವಕಾಶ ಕೋರಿದ್ದಾರೆ. 
 
ವಿಧಾನಸಭಾ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಸಹಿ ಸಂಗ್ರಹಿಸಿಲಾಗಿದ್ದು, ಒಟ್ಟು 57 ಮಂದಿ ಶಾಸಕರು ತಮ್ಮ ಸಹಿ ನಮೂದಿಸಿದ್ದಾರೆ. ಈ ಮೂಲಕ ವಿಶೇಷ ಚರ್ಚೆಗೆ ಅವಕಾಶ ಪಡೆದು ಕಾನೂನಿಗೆ ತಿದ್ದುಪಡಿ ತಂದು ಲೋಕಾಯುಕ್ತರನ್ನು ಪದಚ್ಯುತಿಗೊಳಿಸಲು ಮುಂದಾಗಿದ್ದಾರೆ. 
 
ಇನ್ನು ಶೆಟ್ಟರ್ ಹಾಗೂ ಜೆಡಿಎಸ್ ಸದಸ್ಯ ವೈ.ಎಸ್.ವಿ. ದತ್ತಾ ಅವರ ನೇತೃತ್ವದಲ್ಲಿ ಸಹಿ ಸಂಗ್ರಹಿಸಿ ಮನವಿ ಸಲ್ಲಿಸಲಾಗಿದ್ದು, ಮನವಿಗೆ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ. 
 
ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಶೆಟ್ಟರ್, ತಮ್ಮ ಮೇಲೆಯೇ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತರು ನೈತಿಕ ಹೊಣೆಹೊತ್ತು ತಾವಾಗಿಯೇ ರಾಜೀನಾಮೆ ನೀಡಬೇಕಿತ್ತು. ಆದರೆ ಅವರು ಆ ಗೋಜಿಗೆ ಹೋಗಿಲ್ಲ. ಅಲ್ಲದೆ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದ್ದರೂ ಕೂಡ ಅವರು ಸ್ಪಂಧಿಸದೆ ರಾಜೀನಾಮೆಗೆ ಮುಂದಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದರು. 
 
ಈ ಸಂಬಂಧ ವಿಧಾನಸಭೆಯಲ್ಲಿ ಸೋಮವಾರ ಚರ್ಚೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. 
 
ಇನ್ನು ಈ ಪ್ರಕರಣ ಸಂಬಂಧ ಈ ಹಿಂದೆ ಪ್ರತಿಕ್ರಿಯಿಸಿದ್ದ ಮುಖ್ಯ ಲೋಕಾಯುಕ್ತ ನ್ಯಾ.ವೈ.ಭಾಸ್ಕರ್ ರಾವ್ ಅವರು ನನ್ನ ಮೇಲೆ ಆರೋಪ ಕೇಳಿ ಬರುತ್ತಿರಬಹುದು. ಆದರೆ ಆರೋಪ ಸಾಬೀತಾಗದೆ, ತನಿಖಾ ವರದಿ ಸಲ್ಲಿಕೆಯಾಗದೆ ನಾನು ಪದವಿಗೆ ರಾಜೀನಾಮೆ ನೀಡುವುದಿಲ್ಲ ಎಂದಿದ್ದರು. ಅಲ್ಲದೆ ಸರ್ಕಾರವೂ ಕೂಡ ಲೋಕಾಯುಕ್ತರನ್ನು ಪದಚ್ಯುತಿಗೊಳಿಸಲು ಸರ್ಕಾರ ಬಳಿ ಯಾವುದೇ ಪುರಾವೆಗಳಿಲ್ಲ ಎಂದು ಪದಚ್ಯುತಿಗೆ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಈ ಹಾದಿ ತುಳಿದಿವೆ.  
 
ಏನಿದು ಪ್ರಕರಣ?: 
ಲೋಕಾಯುಕ್ತ ಇಲಾಖೆಯ ಅಧಿಕಾರಿಗಳೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದು, ಒಂದು ಕೋಟಿ ಲಂಚ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತನಿಖೆ ಮುಂದುವರಿಸಿದ್ದ ಬೆಂಗಳೂರು ಲೋಕಾಯುಕ್ತ ಎಸ್‌ಪಿ ಸೋನಿಯಾ ನಾರಂಗ್ ಅವರು ಈ ಪ್ರಕರಣದ ತನಿಖೆ ನಡೆಸುತ್ತಿದ್ದರು. ಆದರೆ ಅವರ ತನಿಖೆಗೆ ರಾಜ್ಯದ ಮುಖ್ಯ ಲೋಕಾಯುಕ್ತ ನ್ಯಾ.ವೈ.ಭಾಸ್ಕರ್ ರಾವ್ ಅವರು ತಡೆ ನೀಡಿ ಪ್ರಕರಣವನ್ನು ತಮ್ಮ ಸ್ವಂತ ಅಧಿಕಾರ ಬಳಸಿ ಸಿಸಿಬಿಗೆ ವಹಿಸಿದ್ದರು. 
 
ಈ ಸಂಬಂಧ ಪ್ರತಿಕ್ರಿಯಿಸಿದ್ದ ರಾಜ್ಯದ ಉಪ ಲೋಕಾಯುಕ್ತ ಸುಭಾಷ್ ಬಿ. ಅಡಿ ಅವರು, ಭ್ರಷ್ಟಾಚಾರದ ಪ್ರಕರಣಗಳನ್ನು ತನಿಖೆ ನಡೆಸುವ ಅಧಿಕಾರ ಸಿಸಿಬಿಗೆ ಇದೆಯೇ ಎಂಬ ಬಗ್ಗೆ ನನಗೆ ತಿಳಿದಿಲ್ಲ. ಆದರೆ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸುತ್ತಿರುವಾಗಿ ಮುಖ್ಯ ಲೋಕಾಯುಕ್ತರು ತಮ್ಮ ಬಳಿ ಸಲಹೆ ಪಡೆದಿಲ್ಲ ಎಂದು ಆರೋಪಿಸಿದ್ದರು. ಇದು ಲೋಕಾಯುಕ್ತ ಇಲಾಖೆ ಹಾಗೂ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಈ ಹಿನ್ನೆಲೆಯಲ್ಲಿ ಸ್ವಯಂ ನಿರ್ಧಾರ ಕೈಗೊಂಡಿದ್ದ ರಾಜ್ಯ ಸರ್ಕಾರ, ಪ್ರಸ್ತುತ ವಿಶೇಷ ತನಿಖಾ ತಂಡ ರಚಿಸಿತನಿಖೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಪದಚ್ಯುತಿಗೆ ಆಗ್ರಹಿಸಿವೆ. 
 
ಇನ್ನು ಪ್ರಕರಣದಲ್ಲಿ ಲೋಕಾಯುಕ್ತ ಇಲಾಖೆಯ ಜಂಟಿ ಆಯುಕ್ತ ರಿಯಾಜ್, ಲೋಕಾಯುಕ್ತ ನ್ಯಾ.ವೈ.ಭಾಸ್ಕರ್ ರಾವ್ ಅವರ ಪುತ್ರ ಅಶ್ವಿನ್ ರಾವ್ ಹಾಗೂ ಅವರ ಸಂಬಂಧಿ ಆಂಧ್ರ ಮೂಲದ ಕೃಷ್ಣ ರಾವ್ ಅಲಿಯಾಸ್ ನರಸಿಂಹ ರಾವ್ ಅವರು ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. 

ವೆಬ್ದುನಿಯಾವನ್ನು ಓದಿ