ಲೋಕಾಯುಕ್ತರ ಪುತ್ರ ಫೋರ್ಜರಿ ಪ್ರಕರಣದಲ್ಲೂ ಆರೋಪಿ...?!

ಶನಿವಾರ, 4 ಜುಲೈ 2015 (12:30 IST)
ಲೋಕಾಯುಕ್ತ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದ ಪ್ರಮುಖ ಆರೋಪಿಯಾಗಿರುವ ರಾಜ್ಯದ ಮುಖ್ಯ ಲೋಕಾಯುಕ್ತ ನ್ಯಾ.ವೈ.ಭಾಸ್ಕರ್ ರಾವ್ ಅವರ ಪುತ್ರ ಅಶ್ವಿನ್ ರಾವ್ ಅವರು ಅಧಿಕಾರಿಗಳ ಸಹಿ ಫೋರ್ಜರಿ ಮಾಡಿದ ಪ್ರಕರಣದಲ್ಲೂ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. 
 
ಹೌದು, ಈ ಸಂಬಂಧ ಅಶ್ವಿನ್ ರಾವ್ ವಿರುದ್ಧ ಕಳೆದ ನಾಲ್ಕೈದು ವರ್ಷಗಳ ಹಿಂದೆಯೇ ಪ್ರಕರಣ ದಾಖಲಾಗಿರುವುದು ಪ್ರಸ್ತುತ ಬೆಳಕಿಗೆ ಬಂದಿದೆ. 
 
ಮೂಲಗಳ ಪ್ರಕಾರ, ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯಲ್ಲಿರುವ 16 ಎಕರೆ ಭೂಮಿಯನ್ನು ಅಶ್ವಿನ್ ರಾವ್ 2008 ಜೂನ್ 24 ಮತ್ತು 25ರಂದು ಬೇರೊಬ್ಬರಿಗೆ ಮಾರಾಟ ಮಾಡಿದ್ದಾರೆ. ಈ ವೇಳೆ ವಿಕಾರಾಬಾದ್ ಉಪನೋಂದಣಾಧಿಕಾರಿಯ ಸಹಿಯನ್ನು ನಕಲಿ ಮಾಡಿ ಪಹಣಿ ತಿದ್ದುವ ಮೂಲಕ ಅಕ್ರಮ ಎಸಗಿದ್ದರು ಎನ್ನಲಾಗಿದೆ. 
 
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಈ ಹಿಂದೆ ಅಂದರೆ 2011ರ ಆಗಸ್ಟ್ 9ರಂದು ಆರೋಪ ಪಟ್ಟಿಯನ್ನೂ ಸಲ್ಲಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಅಶ್ವಿನ್ ರಾವ್ ಸೇರಿ ಒಟ್ಟು 36 ಮಂದಿ ಆರೋಪಿಗಳಿದ್ದಾರೆ ಎಂದು ತಿಳಿದು ಬಂದಿದೆ. 
 
ಇನ್ನು ಅಶ್ವಿನ್ ಪ್ರಸ್ತುತ ಲೋಕಾಯುಕ್ತ ದಾಳಿ ನಡೆಸುವ ಬೆದರಿಕೆವೊಡ್ಡಿ ಭ್ರಷ್ಟ ಅಧಿಕಾರಿಗಳಿಂದ ಸುಮಾರು 100 ಕೋಟಿಗೂ ಮೀರಿದ ಹಣ ಪಡೆದಿದ್ದಾರೆ ಎಂಬ ಆರೋಪಕ್ಕೆ ಸಿಲುಕಿದ್ದು, ಪ್ರಸ್ತುತ ತನಿಖೆ ನಡೆಯುತ್ತಿದೆ.  

ವೆಬ್ದುನಿಯಾವನ್ನು ಓದಿ