'ಲೋಕಾ' ಭ್ರಷ್ಟಾಚಾರ ಪ್ರಕರಣ: ಭಾಸ್ಕರ್ ರಾವ್ ರಾಜೀನಾಮೆ ನೀಡುವ ಸಾಧ್ಯತೆ ?!

ಸೋಮವಾರ, 27 ಜುಲೈ 2015 (11:50 IST)
ರಾಜ್ಯದ ಲೋಕಾಯುಕ್ತ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ ಎಂಬ ಕಾರಣದಿಂದ ಮುಖ್ಯ ಲೋಕಾಯುಕ್ತ ನ್ಯಾ.ವೈ.ಭಾಸ್ಕರ್ ರಾವ್ ಅವರ ಪುತ್ರ ಅಶ್ವಿನ್ ರಾವ್‌ನನ್ನು ಇಂದು ಬಂಧಿಸಿರುವ ಬೆನ್ನಲ್ಲೇ ಲೋಕಾಯುಕ್ತರೂ ಕೂಡ ತಮ್ಮ ಸ್ಥಾನಕ್ಕೆ ಇಂದು ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ. 
 
ಹೌದು, ಸರ್ಕಾರ ಪ್ರಕರಣದ ತನಿಖೆಗಾಗಿ ಎಸ್ಐಟಿ ತಂಡವನ್ನು ರಚಿಸಿದ್ದ ಹಿನ್ನೆಲೆಯಲ್ಲಿ ಬಂಧನ ಕಾರ್ಯಾಚರಣೆ ಹಮ್ಮಿಕೊಂಡಿದ್ದ ತನಿಖಾಧಿಕಾರಿಗಳು ಇಂದು ಪ್ರಕರಣದ ಪ್ರಮುಖ ಆರೋಪಿ ಅಶ್ವಿನ್ ರಾವ್‌ನನ್ನು ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬೆನ್ನಲ್ಲೇ ಅಶ್ವಿನ್ ರಾವ್ ತಂದೆ, ಮುಖ್ಯ ಲೋಕಾಯುಕ್ತ ವೈ.ಭಾಸ್ಕರ್ ರಾವ್ ಅವರು ರಾಜ್ಯದ ಖ್ಯಾತ ವಕೀಲ ಅಶೋಕ್ ಹಾರ್ನಳ್ಳಿ ಅವರೊಂದಿಗೆ ರಾಜೀನಾಮೆ ಸಂಬಂಧ ವಿಸ್ತೃತ ಚರ್ಚೆ ನಡೆಸುತ್ತಿದ್ದು, ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. 
 
ಮೂಲಗಳ ಪ್ರಕಾರ, ತಮ್ಮ ಪುತ್ರನ ಬಂಧನದಂತೆ ನನ್ನನ್ನೂ ಬಂಧಿಸಬಹುದು ಎಂಬ ಭಯ ಲೋಕಾಯುಕ್ತ ಭಾಸ್ಕರ್ ರಾವ್ ಅವರನ್ನು ಕಾಡುತ್ತಿದ್ದು, ಇದೇ ಕಾರಣದಿಂದಲೇ ತಮ್ಮ ಪದವಿಗೆ ರಾಜೀನಾಮೆ ನೀಡಿ ಬಂಧನಕ್ಕೂ ಮುನ್ನವೇ ನಿರೀಕ್ಷಣಾ ಜಾಮೀನು ಪಡೆಯಲು ಯತ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಲೋಕಾಯುಕ್ತರು ತಮ್ಮ ವಕೀಲರೊಂದಿಗೆ ನಿನ್ನೆಯಿಂದಲೇ ಮಾತುಕತೆ ನಡೆಸುತ್ತಿದ್ದಾರೆ ಎಂದೂ ತಿಳಿದು ಬಂದಿದೆ.

ವೆಬ್ದುನಿಯಾವನ್ನು ಓದಿ