'ಲೋಕಾ'ದಲ್ಲಿ ಭ್ರಷ್ಟಾಚಾರ ಪ್ರಕರಣ: ಆರೋಪಿಗಳಿಗೆ ಆಗಸ್ಟ್ 27ರ ವರೆಗೆ ನ್ಯಾಯಾಂಗ ಬಂಧನ

ಶುಕ್ರವಾರ, 14 ಆಗಸ್ಟ್ 2015 (14:51 IST)
ಲೋಕಾಯುಕ್ತ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದ ನಾಲ್ವರೂ ಆರೋಪಿಗಳು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಲೋಕಾಯುಕ್ತ ವಿಶೇಷ ಕೋರ್ಟ್ ಇಂದು ವಜಾಗೊಳಿಸಿದ್ದು, ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೆ ಆಗಸ್ಟ್ 27ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ. 
 
ಇಲಾಖೆಯ ಅಧಿಕಾರಿಗಳೊಂದಿಗೆ ಶಾಮೀಲಾಗಿ ಸಾಕಷ್ಟು ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಬಂಧಿತರಾಗಿದ್ದ ಆರೋಪಿಗಳಾದ ಅಶೋರ್ ಕುಮಾರ್, ಸಯ್ಯದ್ ರಿಯಾಜ್, ಶ್ರೀನಿವಾಸಗೌಡ ಹಾಗೂ ಶಂಕರೇಗೌಡ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಕೋರ್ಟ್ ವಿಸ್ತರಿಸಿದೆ. 
 
ಇನ್ನು ಈ ಹಿಂದೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ಎಲ್ಲಾ ಆರೋಪಿಗಳನ್ನು ಎರಡು ಬಾರಿ ತಮ್ಮ ವಶಕ್ಕೆ ಪಡೆದು ವಿಚಾರಿಸಿದ್ದರು. ಬಳಿಕ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಅವರನ್ನು ಕೋರ್ಟ್‌ಗೆ ಹಾಜರುಪಡಿಸಿದ್ದರು. ಈ ವೇಳೆ ನಾಲ್ವರೂ ಆರೋಪಿಗಳಿಗೆ ಆಗಸ್ಟ್ 14ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಮೊದಲ ನ್ಯಾಯಾಂಗ ಬಂಧನ ಅವಧಿ ಇಂದಿಗೆ ಮುಕ್ತಾಯವಾದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಕೋರ್ಟ್, ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆಗಸ್ಟ್ 27ರ ವರೆಗೆ ಮತ್ತೆ ನ್ಯಾಯಾಂಗ ಬಂಧನಕ್ಕೊಪ್ಪಿಸಿ ಆದೇಶಿಸಿತು.  

ವೆಬ್ದುನಿಯಾವನ್ನು ಓದಿ