'ಲೋಕಾ' ಭ್ರಷ್ಟಾಚಾರ ಪ್ರಕರಣ: ಕೊನೆಗೂ ಎಸ್ಐಟಿ ಖೆಡ್ಡಾಗೆ ಬಿದ್ದ ಆರೋಪಿ ಅಶ್ವಿನ್ ರಾವ್

ಸೋಮವಾರ, 27 ಜುಲೈ 2015 (11:32 IST)
ರಾಜ್ಯದ ಲೋಕಾಯುಕ್ತ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದ ಪ್ರಮುಖ ಆರೋಪಿ ಅಶ್ವಿನ್ ರಾವ್ ಕೊನೆಗೂ ಪ್ರಕರಣದ ತನಿಖೆ ನಡೆಸುತ್ತಿದ್ದ ವಿಶೇಷ ತನಿಖಾ ತಂಡದ ಅಧಿಕಾರಿಗಳ ಬಲೆಗೆ ಬಿದ್ದಿದ್ದು, ಇಂದು ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಬಂಧಿಸಿದ್ದಾರೆ. 
 
ಬೆಂಗಳೂರು ಪಶ್ಚಿಮ ವಲಯದ ಡಿಸಿಪಿ ಲಾಬೂರಾಮ್ ನೇತೃತ್ವದ ಎಸ್ಐಟಿ ತಂಡ ಅಶ್ವಿನ್ ರಾವ್‌ನನ್ನು ಬಂಧಿಸಿದ್ದು, ಆತನ ಬಂಧನಕ್ಕಾಗಿಯೇ ಮಹಾರಾಷ್ಟ್ರಕ್ಕೆ ತಲುಪಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಹಲವು ದಿನಗಳಿಂದ ಕೈಗೊಂಡಿದ್ದ ಕಾರ್ಯಚರಣೆ ಕೊನೆಗೂ ಫಲಿಸಿದ್ದು, ಔರಂಗಾಬಾದ್‌ನಲ್ಲಿ ಇಂದು ಬಂಧಿಸಲಾಗಿದೆ.  
 
ಈ ಪ್ರಕರಣ ಸಂಬಂಧ ತನಿಖೆ ಆರಂಭಿಸಿದ್ದ ಎಸ್ಐಟಿ ಅಧಿಕಾರಿಗಳು, ಪ್ರಸ್ತುತದ ವರೆಗೆ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಪ್ರಕರಣದ ಒಂದನೇ ಆರೋಪಿ ಅಶ್ವಿನ್ ರಾವ್, ಎರಡನೇ ಆರೋಪಿ ಸಯ್ಯದ್ ರಿಯಾಜ್, ಮೂರನೇ ಆರೋಪಿ ಅಶೋಕ್ ಕುಮಾರ್, ನಾಲ್ಕನೇ ಆರೋಪಿ ಶ್ರೀನಿವಾಸಗೌಡ, ಐದನೇ ಆರೋಪಿ ಹೊಟ್ಟೆಕೃಷ್ಣ ಹಾಗೂ ಆರನೇ ಆರೋಪಿ ಶಂಕರೇಗೌಡ ಅವರನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ. 
 
ಇನ್ನು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದೀರಿ. ಆದ ಕಾರಣ ನಿಮ್ಮ ಮೇಲೆ ದಾಳಿ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ. ಆದರೆ ಒಂದು ಕೋಟಿ ಲಂಚ ನೀಡಿದಲ್ಲಿ ನಿಮ್ಮನ್ನು ವಿಚಾರಣೆ ನಡೆಸುವುದಿಲ್ಲ ಎಂದು ಅಶ್ವಿನ್ ರಾವ್ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಬೆಂಗಳೂರು ಜಿಲ್ಲಾ ಪಂಚಾಯತ್‌ನ ಲೋಖೋಪಯೋಗಿ ವಿಭಾಗದ ಎಂಜಿನಿಯರ್ ಕೃಷ್ಣಮೂರ್ತಿ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. 
 
ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಆದರೆ ಲೋಕಾಯುಕ್ತ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣ ಇದಾಗಿದ್ದು, ಲೋಕಾಯುಕ್ತ ಪೊಲೀಸರೇ ತನಿಖೆ ನಡೆಸುವುದು ಸರಿಯಲ್ಲ ಎಂಬ ಕಾರಣದಿಂದ ಸರ್ಕಾರ ಸ್ವಯಂ ನಿರ್ಧಾರ ಕೈಗೊಂಡು ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಈ ಹಿನ್ನೆಲೆಯಲ್ಲಿ ಎಡಿಜಿಪಿ ಕಮಲ್ ಪಂತ್ ನೇತೃತ್ವದಲ್ಲಿ ತನಿಖೆ ನಡೆಸುತ್ತಿದ್ದು, ಅಶ್ವಿನ್ ರಾವ್‌ನನ್ನು ಇಂದು ಬಂಧಿಸಿದ್ದು, ಬೆಂಗಳೂರು ನಗರಕ್ಕೆ ಕರೆತರುತ್ತಿದ್ದಾರೆ. ಬಂಧಿತ ಅಶ್ವಿನ್ ರಾವ್ ರಾಜ್ಯದ ಪ್ರಧಾನ ಲೋಕಾಯುಕ್ತ ನ್ಯಾ.ವೈ.ಭಾಸ್ಕರ್ ರಾವ್ ಅವರ ಪುತ್ರ.   

ವೆಬ್ದುನಿಯಾವನ್ನು ಓದಿ