'ಲೋಕಾ' ಭ್ರಷ್ಟಾಚಾರ ಪ್ರಕರಣ: ಇಬ್ಬರು ಆರೋಪಿಗಳ ಕಸ್ಟಡಿ ಇಂದಿಗೆ ಅಂತ್ಯ

ಶುಕ್ರವಾರ, 31 ಜುಲೈ 2015 (11:49 IST)
ಲೋಕಾಯುಕ್ತ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳ ಬಂಧನದ ಅವಧಿ ಇಂದಿಗೆ ಅಂತ್ಯಗೊಂಡಿರುವ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ಇಬ್ಬರೂ ಆರೋಪಿಗಳನ್ನು ಇಂದು ನ್ಯಾಯಾಲಯಕ್ಕೆ ಮರು ಹಾಜರುಪಡಿಸಲಿದ್ದಾರೆ. 
 
ಪ್ರಕರಣದ ಮೂರನೇ ಮತ್ತು ನಾಲ್ಕನೇ ಆರೋಪಿಗಳಾದ ಶ್ರೀನಿವಾಸಗೌಡ ಹಾಗೂ ಶಂಕರೇಗೌಡ ಅವರನ್ನು ಇಂದು ನಗರದ ಲೋಕಾಯುಕ್ತ ವಿಶೇಷ ಕೋರ್ಟ್‌ಗೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆ ಅಗತ್ಯವಿರುವ ಹಿನ್ನೆಲೆಯಲ್ಲಿ ಮತ್ತೆ ತಮ್ಮ ವಶಕ್ಕೇ ನೀಡುವಂತೆ ಅಧಿಕಾರಿಗಳು ಮನವಿ ಮಾಡಲಿದ್ದಾರೆ ಎನ್ನಲಾಗಿದೆ. 
 
ಈ ಹಿಂದೆ ಈ ಇಬ್ಬರೂ ಆರೋಪಿಗಳನ್ನು ಕೋರ್ಟ್ 10 ದಿನಗಳ ಕಾಲ ಎಸ್ಐಟಿ ತನಿಖಾಧಿಕಾರಿಗಳ ವಶಕ್ಕೆ ನೀಡಿತ್ತು. ಈ ಅವಧಿ ಇಂದಿಗೆ ಅಂತ್ಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಂದು ಮತ್ತೆ ಕೋರ್ಟ್‌ಗೆ ಹಾಜರು ಪಡಿಸಲಾಗುತ್ತಿದೆ. ಇವರನ್ನು ಕಳೆದ ಜುಲೈ 21ರಂದು ಬಂಧಿಸಿ 22ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ತಮ್ಮ ವಶಕ್ಕೆ ಪಡೆದಿದ್ದ ತನಿಖಾಧಿಕಾರಿಗಳು, ಹಲವೆಡೆ ಡೀಲಿಂಗ್ ನಡೆಸಿದ್ದರು ಎಂಬ ಆರೋಪ ಹಿನ್ನೆಲೆಯಲ್ಲಿ ಹಲವು ರಹಸ್ಯ ಸ್ಥಳಗಳಿಗೆ ಕರೆದೊಯ್ದು ವಿಚಾರಣೆ ನಡೆಸಿದ್ದರು. 

ವೆಬ್ದುನಿಯಾವನ್ನು ಓದಿ