ಲಾಟರಿ ಹಗರಣ: 6 ಮಂದಿ ಪೊಲೀಸ್ ಅಧಿಕಾರಿಗಳ ವಿಚಾರಣೆ ಇಂದು

ಸೋಮವಾರ, 25 ಮೇ 2015 (11:21 IST)
ಲಾಟರಿ ಹಗರಣ ಸಂಬಂಧ ರಾಜ್ಯದ ಸಿಐಡಿ ಅಧಿಕಾರಿಗಳು ಮಧ್ಯಂತರ ವರದಿ ಸಲ್ಲಿಸಿರುವ ಬೆನ್ನಲ್ಲೇ ಮತ್ತೆ ತನಿಖೆಯು ಚುರುಕುಗೊಂಡಿದ್ದು, ಇಂದು ಪೊಲೀಸ್ ಇಲಾಖೆಯಲ್ಲಿನ ಆರು ಮಂದಿ ಉನ್ನತಾಧಿಕಾರಿಗಳು ವಿಚಾರಣೆಗೊಳಪಡಲಿದ್ದಾರೆ ಎನ್ನಲಾಗಿದೆ.  
 
ಮೂಲಗಳ ಪ್ರಕಾರ, ರಾಜ್ಯ ಪೊಲೀಸ್ ಇಲಾಖೆಯಲ್ಲಿ ಡಿಜಿಪಿ, ಎಡಿಜಿಪಿ ಸೇರಿದಂತೆ ಉನ್ನತ ಹುದ್ದೆಗಳನ್ನು ನಿಭಾಯಿಸುತ್ತಿರುವ ಆರು ಮಂದಿ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಲಾಗಿದ್ದು, ಇಂದು ವಿಚಾರಣೆ ನಡೆಸಲಾಗುತ್ತದೆ ಎನ್ನಲಾಗಿದೆ. ಆದರೆ ಅಧಿಕಾರಿಗಳ ವಿಳಾಸವನ್ನು ಬಹಿರಂಗಗೊಳಿಸಿಲ್ಲ.        
 
ಇನ್ನು ಶನಿವಾರ ಅಧಿಕಾರದಿಂದ ಅಮಾನತುಗೊಂಡಿದ್ದ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರನ್ನೂ ಕೂಡ ಇಂದು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎನ್ನಲಾಗಿದ್ದು, ಇವರನ್ನು ನಿನ್ನೆ 9 ಗಂಟೆಗೂ ಹೆಚ್ಚು ಕಾಲ ವಿಚಾರಣೆಗೆ ಒಳಪಡಿಸಲಾಗಿತ್ತು. ಪ್ರಕರಣ ಸಂಬಂಧ ಸರ್ಕಾರವು ಅಲೋಕ್ ಕುಮಾರ್ ಹಾಗೂ ಎಸ್‌ಪಿ ಧರಣೇಶ್ ಎಂಬ ಇಬ್ಬರು ಅಧಿಕಾರಿಗಳನ್ನು ಈಗಾಗಲೇ ಅಮಾನತುಗೊಳಿಸಿದೆ. 
 
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದ್ದು, ವರದಿಯಲ್ಲಿ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 35 ಕ್ಕೂ ಹೆಚ್ಚು ಮಂದಿ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಚುರುಕುಗೊಳಿಸಲಾಗಿದೆ. 

ವೆಬ್ದುನಿಯಾವನ್ನು ಓದಿ