ಬಹುಕೋಟಿ ಲಾಟರಿ ಹಗರಣ: ಇಂದು 6 ಮಂದಿ ಪೊಲೀಸರ ವಿಚಾರಣೆ ಸಾಧ್ಯತೆ

ಮಂಗಳವಾರ, 26 ಮೇ 2015 (12:20 IST)
ಬಹುಕೋಟಿ ಲಾಟರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ರಾಜ್ಯ ಪೊಲೀಸ್ ಇಲಾಖೆಯಲ್ಲಿ ಉನ್ನತ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ ಆರು ಮಂದಿ ಅಧಿಕಾರಿಗಳನ್ನು ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ ಎಂಬ ಮಾಹಿತಿ ವಿಶ್ವಾಸನೀಯ ಮೂಲಗಳಿಂದ ಲಭ್ಯವಾಗಿದೆ.  
 
ಸಿಐಡಿ ಅಧಿಕಾರಿಗಳು ಪ್ರಕರಣದಲ್ಲಿ ಕೈವಾಡವಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಸಾರ್ವಜನಿಕ ಕರ್ತವ್ಯದಿಂದ ಅಮಾನತುಗೊಂಡಿದ್ದ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರನ್ನು ಭಾನುವಾರ ಹಾಗೂ ಸೋಮವಾರ ಎರಡು ದಿನಗಳ ಕಾಲ ಸುಮಾರು 12 ಗಂಟೆಗೂ ಮೀರಿ ತನಿಖೆ ನಡೆಸಿದ್ದರು. ಅಂತೆಯೇ ಇಂದು ಇತರೆ ಅಧಿಕಾರಿಗಳನ್ನು ತನಿಖೆಗೊಳಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.  
 
ಇನ್ನು ಪ್ರಕರಣ ಸಂಬಂಧ ಪರಿಶೀಲನೆ ನಡೆಸಿದ್ದ ಸಿಐಡಿ ಅಧಿಕಾರಿಗಳು ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದ್ದರು. ಅಲ್ಲದೆ ವರದಿಯಲ್ಲಿ ರಾಜ್ಯದ ಪೊಲೀಸ್ ಇಲಾಖೆಯ ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 23 ಮಂದಿ ಅಧಿಕಾರಿಗಳು ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ಚುರುಕು ಗೊಂಡಿದೆ.   
 
ಈ ಸಂಬಂಧ ಕಳೆದ ಎರಡು ದಿನಗಳ ಹಿಂದೆಯೇ ಅಧಿಕಾರಿಗಳಿಗೆ ತನಿಖೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿ ಸೂಚಿಸಲಾಗಿತ್ತು ಎನ್ನಲಾಗಿದ್ದು, ಇವರಲ್ಲಿ ಕೆಲವರು ಇಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಅಲ್ಲದೆ ಇನ್ನೂ ಕೆಲ ಅಧಿಕಾರಿಗಳು ತಾವು ವಿಚಾರಣೆಗೆ ಹಾಜರಾಗಲು ಸ್ವಲ್ಪ ಮಟ್ಟಿನ ಕಾಲಾವಕಾಶ ಕೋರಿದ್ದಾರೆ ಎಂದು ಹೇಳಲಾಗಿದೆ.   

ವೆಬ್ದುನಿಯಾವನ್ನು ಓದಿ