ಲಾಟರಿ ದಂಧೆ ಪ್ರಕರಣ: ಅಧಿಕಾರದಿಂದ ಅಲೋಕ್ ಕಿಕ್ ಔಟ್

ಭಾನುವಾರ, 24 ಮೇ 2015 (12:16 IST)
ಒಂದಂಕಿ ಲಾಟರಿ ದಂಧೆಯಲ್ಲಿ ಹೆಸರು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಪ್ರಸ್ತುತ ಎರಡನೇ ಪೊಲೀಸ್ ವಿಕೆಟ್ ಪತನಗೊಂಡಿದ್ದು, ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್​ಕುಮಾರ್ ಅವರನ್ನು ಸರ್ಕಾರ ನಿನ್ನೆ  ಅಮಾನತುಗೊಳಿಸಿದೆ. 
 
ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿರುವ ಕಿಂಗ್​ಪಿನ್ ಪರಿರಾಜನ್ ಜೊತೆ ನಂಟು ಹೊಂದಿದ್ದರು ಎಂಬ ಆರೋಪ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಮುಖ್ಯಮಂತ್ರಿ ಸಂಬಂಧಿಕರೂ ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದು ಮತ್ತಷ್ಟು ಆಘಾತ ಹೆಚ್ಚಿಸಿದ್ದು, ಪ್ರಕರಣದ ಗಂಭೀರತೆಗೆ ಎಡೆ ಮಾಡಿಕೊಟ್ಟಿದೆ. 
 
ಇದರೊಂದಿಗೆ ಲಾಟರಿ ದಂಧೆಯ ಕರಾಳಮುಖ ಅನಾವರಣಗೊಂಡಿದ್ದು, ರಾಜಕಾರಣಿಗಳು, ಪೊಲೀಸರು ಹಾಗೂ ಪಾತಕಿಗಳ ಅಪವಿತ್ರ ಮೈತ್ರಿಗೆ ಉತ್ತಮ ನಿದರ್ಶನವಾಗಿದೆ. 
 
ಲಾಟರಿ ನಿಯಂತ್ರಣ ದಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಸ್​ಪಿ ಧರಣೇಶ್ ಅವರನ್ನು ಕೆಲ ದಿನಗಳ ಹಿಂದೆ ಅಮಾನತು ಮಾಡಲಾಗಿತ್ತು. ಆದ್ದರಿಂದ ಧರಣೇಶ್ ಮೊದಲ ವಿಕೆಟ್ ಆಗಿದ್ದರೆ, ಅಲೋಕ್ ಕುಮಾರ್ ಎರಡನೇ ವಿಕೆಟ್ ಆಗಿದ್ದಾರೆ. 
 
ಈ ಅಕ್ರಮ ದಂಧೆಗೆ ಕುಮ್ಮಕ್ಕು ನೀಡಿದ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ರಾಜಕಾರಣಿಗಳಲ್ಲಿ ನಡುಕ ಶುರುವಾಗಿದೆ. ಅಲ್ಲದೆ ಅಲೋಕ್​ ಕುಮಾರ್ ಸೇರಿ 35 ಮಂದಿ ಪ್ರಮುಖ ಪೊಲೀಸ್ ಅಧಿಕಾರಿಗಳು ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಸಿಐಡಿ ಅಧಿಕಾರಿಗಳು ತನ್ನ ವರದಿಯಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ. 
 
ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಮಾತನಾಡಿದ್ದು, ಸಿಐಡಿ ಮಧ್ಯಂತರ ವರದಿಯನ್ನು ಸರ್ಕಾರ ಒಪ್ಪಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಯಾವುದೇ ಅಧಿಕಾರಿಯನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆಂದು ಸ್ಪಷ್ಟಪಡಿಸಿದ್ದಾರೆ.
 
ಇನ್ನು ಈ ಹಗರಣದಲ್ಲಿ ರಾಜಕಾರಣಿಗಳಿಗೆ ಕನಿಷ್ಠವೆಂದರೂ 1000 ಕೋಟಿ ರೂಪಾಯಿಗೂ ಮೀರಿ ಸಂದಾಯವಾಗಿ, ವಾರ್ಷಿಕವಾಗಿ ಹಣ ಸಂದಾಯವಾಗಿದೆ ಎನ್ನಲಾಗಿದೆ. 

ವೆಬ್ದುನಿಯಾವನ್ನು ಓದಿ