ಲಾಟರಿ ಪ್ರಕರಣ: ಸಿಬಿಐ ತನಿಖೆಗೆ ಅಧಿಸೂಚನೆ ಹೊರಡಿಸಿದ ಸರ್ಕಾರ

ಗುರುವಾರ, 28 ಮೇ 2015 (17:52 IST)
ಬಹುಕೋಟಿ ಒಂದಂಕಿ ಲಾಟರಿ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಇಂದು ಅಧಿಕೃತವಾಗಿ ಅಧಿಸೂಚನೆ ಹೊರಡಿಸುವ ಮೂಲಕ ಪ್ರಕರಣವನ್ನು ಸಿಬಿಐಗೆ ವಹಿಸಿದೆ. 
 
ನಗರದ ಸಿಬಿಐ ಕಚೇರಿಯ ಮುಖ್ಯಾಧಿಕಾರಿ ಸುಬ್ರಹ್ಮಣ್ಯೇಶ್ವರ ಅವರ ಮೂಲಕವಾಗಿ ನವದೆಹಲಿಯಲ್ಲಿನ ಕೇಂದ್ರ ಕಚೇರಿಗೆ ಈ ಅಧಿಸೂಚನೆಯನ್ನು ರವಾನಿಸಲಾಗಿದೆ. ಅಧಿಸೂಚನೆಯು ಬಳಿಕ ಕೇಂದ್ರ ಸರ್ಕಾರದ ಗೃಹ ಇಲಾಖೆಗೆ ತಲುಪಲಿದ್ದು, ಇಲಾಖೆಯ ಕಾರ್ಯದರ್ಶಿಗಳು ಮತ್ತೆ ಅಧಿಸೂಚನೆ ಹೊರಡಿಸಿ ಸಿಬಿಐ ಕೇಂದ್ರ ಕಚೇರಿಯ ನಿರ್ದೇಶಕರಿಗೆ ಮತ್ತೊಂದು ಅಧಿಸೂಚನೆ ಹೊರಡಿಸುತ್ತಾರೆ. ಬಳಿಕ ಸಿಬಿಐ ನಿರ್ದೇಶಕರು ಈ ಬಗ್ಗೆ ಕ್ರಮ ಕೈಗೊಂಡು ಯಾವ ವಿಭಾಗಕ್ಕೆ ತನಿಖಾ ಜವಾಬ್ದಾರಿಯನ್ನು ನೀಡಬೇಕೆಂದು ನಿರ್ಧರಿಸಿ ತನಿಖಾಧಿಕಾರಿಗಳ ತಂಡವನ್ನು ಕಳುಹಿಸುತ್ತಾರೆ. ಆ ಬಳಿಕವಷ್ಟೇ ತನಿಖೆ ಆರಂಭವಾಗಲಿದೆ. 
 
ಇನ್ನು ಅಧಿಸೂಚನೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಲಾಟರಿ ನಿಷೇಧವಾಗಿದ್ದ 2007, ಏಪ್ರಿಲ್ 1ರಿಂದ ಹಿಡಿದು ಇಲ್ಲಿನ ವರೆಗೂ ಕೂಡ ತನಿಖೆ ನಡೆಸಬೇಕೆಂದು ಮನವಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. 
 
ಇನ್ನು ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಪ್ರತಿಭಟಿಸಲು ಪ್ರತಿಪಕ್ಷಗಳು ತಯಾರಾಗುತ್ತಿದ್ದಂತೆ ಕಳೆದ ಎರಡು ದಿನಗಳ ಹಿಂದೆ ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ, ಪ್ರಕರಣವನ್ನು ಸಿಬಿಐಗೆ ವಹಿಸುತ್ತಿರುವುದಾಗಿ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರವು ಇಂದು ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದೆ.

ವೆಬ್ದುನಿಯಾವನ್ನು ಓದಿ