ಬೃಹತ್ ಲಾಟರಿ ಹಗರಣ: ಸಿಬಿಐ ತನಿಖೆಗೆ ಒಪ್ಪಿಸಿದ ಸಿಎಂ ಸಿದ್ದರಾಮಯ್ಯ

ಮಂಗಳವಾರ, 26 ಮೇ 2015 (17:10 IST)
ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಹಗರಣ ಎಂಬ ಕುಖ್ಯಾತಿ ಪಡೆದಿರುವ ಬಹುಕೋಟಿ ಲಾಟರಿ ಹಗರಣವನ್ನು ಕೊನೆಗೂ ಸಿಬಿಐ ತನಿಖೆಗೊಪ್ಪಿಸಲು ಸರ್ಕಾರ ತೀರ್ಮಾನಿಸಿದ್ದು, ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದು 2007ರ ಏಪ್ರಿಲ್ 1ರಿಂದ ಇಲ್ಲಿಯವರೆಗೂ ಕೂಡ ತನಿಖೆ ನಡೆಸುವಂತೆ ಮನವಿ ಮಾಡಲಾಗಿದೆ.  
 
ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸಂಪುಟ ಸದಸ್ಯರೊಂದಿಗೆ ಚರ್ಚಿಸಿದ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಕರೆದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಪ್ರಕರಣ ಸಂಬಂಧ ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆದಿದ್ದು, ಸಿಬಿಐನಿಂದ ತನಿಖೆ ನಡೆಸುವಂತೆ ಮನವಿ ಮಾಡಲಾಗಿದೆ. ಅಲ್ಲದೆ ಲಾಟರಿ ದಂಧೆಗೆ ರಾಜ್ಯದಲ್ಲಿ ನಿಷೇಧ ಹೇರಿದ ದಿನದಿಂದ ಇಲ್ಲಿಯವರೆಗೂ ಕೂಡ ತನಿಖೆ ನಡೆಸುವಂತೆ ಮನವಿ ಮಾಡಲಾಗಿದೆ ಎಂದರು. 
 
ರಾಜ್ಯದಲ್ಲಿ 2007ರ ಏಪ್ರಿಲ್ 1ರಂದು ಅಧಿಕೃತವಾಗಿ ಲಾಟರಿ ದಂಧೆಗೆ ನಿಷೇಧ ಹೇರುವ ಮೂಲಕ ಕಡಿವಾಣ ಹಾಕಲಾಗಿತ್ತು. ಆಗ ಜೆಡಿಎಸ್ ಹಾಗೂ ಬಿಜೆಪಿಯ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿತ್ತು ಅಂದಿನಿಂದ ಇಲ್ಲಿಯವರೆಗೂ ಕೂಡ ತನಿಖೆ ನಡೆಸಲಾಗುತ್ತದೆ ಎಂದರು.  
 
ಈ ಸಂಬಂಧ ಮಾಜಿ ಪ್ರಧಾನಿ ದೇವೇಗೌಡರು ಬೇಜವಾಬ್ದಾರಿ ತನದಿಂದ ಮಾತನಾಡಿದ್ದು, ಸಾಕ್ಷ್ಯಗಳಿಲ್ಲದೆ ನಮ್ಮ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಆದರೆ ಸಿಬಿಐ ಬಗ್ಗೆ ಅವರಿಗೆ ಯಾವ ಜ್ಞಾನವಿದೆ ಎಂದು ನನಗೇ ಗೊತ್ತಿಲ್ಲ. ಅಲ್ಲದೆ ಕೇಂದ್ರದಲ್ಲಿ ಕಾಂಗ್ರಸ್ ಸರ್ಕಾರ ಅಸ್ತಿತ್ವದಲ್ಲಿದ್ದ ಸಂದರ್ಭದಲ್ಲಿ ಸಿಬಿಐಯನ್ನು ಚೋರ್ ಬಚ್ಚಾವೊ ಸಂಸ್ಥೆ ಎಂದಿದ್ದವರೂ ಕೂಡ ಅವರೇ. ಆದರೆ ಪ್ರಸ್ತುತ ಸಿಬಿಐ ಬಗ್ಗೆ ಮಾತನಾಡುತ್ತಿದ್ದಾರೆ. 150 ಕೋಟಿ ಲಂಚ ಪಡೆದಿದ್ದ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐಗೆ ವಹಿಸಲಿ ಎಂದು ಅವರು ತಮ್ಮ ಪುತ್ರನಿಗೆ ಏಕೆ ಸಲಹೆ ನೀಡಲಿಲ್ಲ. ದೇವೇಗೌಡರು ಬೇಜವಾಬ್ದಾರಿಯುತವಾಗಿ ವರ್ತಿಸುತ್ತಿದ್ದು, ಸುಳ್ಳು ಆರೋಪ ಮಾಡುವ ಮೂಲಕ ರಾಜಕೀಯವಾಗಿ ನಮಗೆ ಕಪ್ಪು ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.   
 
ಇನ್ನು ಬಿಜೆಪಿಯವರೂ ಕೂಡ ಸಿಬಿಐ ಸಂಸ್ಥೆಯನ್ನು ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಎಂದಿದ್ದರು ಎಂದು ಸುಳ್ಳು ಆರೋಪ ಮಾಡಿದ್ದರು. ಆಧರೆ ಪ್ರಸ್ತುತ ಅವರೂ ಸಿಬಿಐಗೇ ಕೊಡಿ ಎನ್ನುತ್ತಿದ್ದಾರೆ. ಇಷ್ಟಲ್ಲದೆ ಜೆಡಿಎಸ್ ಹಾಗೂ ಬಿಜೆಪಿ ಸರ್ಕಾರಗಳಿದ್ದ ಸಂದರ್ಭದಲ್ಲಿ ಯಾವ ಪ್ರಕರಣವನ್ನೂ ಸಿಬಿಐಗೆ ವಹಿಸಿಲ್ಲ. ಆ ಮೂಲಕ ತಮ್ಮ ಭಂಡತನವನ್ನು ಪ್ರದರ್ಶಿಸಿದ್ದಾರೆ. ಬಿಜೆಪಿಯವರಾದ ಅಶೋಕ, ಶೋಭಾಕರಂದ್ಲಾಜೆ, ಜಗದೀಶ್ ಶೆಟ್ಟರ್ ಅವರಿಗೆಲ್ಲಾ ಯಾವ ನೈತಿಕ ಹಕ್ಕಿದೆ, ನಮ್ಮ ಸರ್ಕಾರವನ್ನು ಪ್ರಶ್ನಿಸುವ ನೈತಿಕತೆ ಅವರಿಗಿದೆಯೇ ಎಂದು ಪ್ರಶ್ನಿಸುವ ಮೂಲಕ ಮಾರ್ಮಿಕವಾಗಿ ಚಾಟಿ ಬೀಸಿದರು. 
 
ಇದೇ ವೇಳೆ, ನಾವು ಅಧಿಕಾರಕ್ಕೆ ಬಂದ ಬಳಿಕ 10ಕ್ಕೂ ಹೆಚ್ಚು ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೇವೆ ಎಂದ ಅವರು, ರಾಜ್ಯದಲ್ಲಿ ಎಲ್ಲವನ್ನೂ ಸಿಬಿಐಗೆ ಕೊಡಬಾರದು, ಕೊಡುವಂತೆಯೂ ಇಲ್ಲ. ಏಕೆಂದರೆ ನಮ್ಮ ಪೊಲೀಸರು ಕೂಡ ತನಿಖೆ ನಡೆಸಲು ಸಮರ್ಥರಾಗಿದ್ದಾರೆ ಎಂದರು. 
 
ವಿಪಕ್ಷಗಳು ದೂರುತ್ತಿರುವಂತೆ ನಮ್ಮ ಸರ್ಕಾರ ಯಾರಿಗೂ ರಕ್ಷಣೆ ನೀಡುತ್ತಿಲ್ಲ. ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ಮಾಡುವವರು ನಾವಲ್ಲ. ಪೊಲೀಸರಿಗೆ ಫೋನ್ ಕೂಡ ಮಾಡೋದಿಲ್ಲ. ಇನ್ನೆಲ್ಲಿಂದ ನಾವು ಮುಚ್ಚಿ ಹಾಕುವುದು. ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಬ್ಲ್ಯಾಕ್ ಮೇಲ್ ಮಾಡುವವರು ವಿಪಕ್ಷ ನಾಯಕರು ಎಂದು ಆರೋಪಿಸಿದರು. ಅದೆಲ್ಲಾ ಅಭ್ಯಾಸವಿರುದು ಅವರಿಗೇ ಎಂದರು. 
 
ಈ ಪ್ರಕರಣದಲ್ಲಿ ನಾನಾಗಲಿ ಅಥವಾ ಗೃಹ ಸಚಿವರಾಗಲಿ ಭಾಗಿಯಾಗಿಲ್ಲ. ಬದಲಾಗಿ ಸೂಕ್ತ ಕ್ರಮ ಕೈಗೊಂಡಿದ್ದೇವೆ. ವಿಪಕ್ಷಗಳ ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾದುವು ಎಂದ ಅವರು, ರಾಜಕೀಯ ಲಾಭಕ್ಕೋಸ್ಕರ, ಜನರಲ್ಲಿ ತಪ್ಪು ಭಾವನೆ ಮೂಡಿಸಲು ಎಲ್ಲರೂ ಷಡ್ಯಂತ್ರ ರೂಪಿಸುತ್ತಿದ್ದಾರೆ. ಅದು ಏನೆಂದು ಜನರಿಗೆ ಗೊತ್ತಾಗಬೇಕು. ಸಾರ್ವಜನಿಕರಲ್ಲಿ ಸರ್ಕಾರದ ಬಗ್ಗೆ ಸಂಶಯ ಮೂಡಬಾರದು ಎಂಬ ಕಾರಣಕ್ಕೆ ಪ್ರಕರಣವನ್ನು ನಾನು ಸಿಬಿಐಗೆ ಒಪ್ಪಿಸಲು ತೀರ್ಮಾನಿಸಿದ್ದೇನೆ ಎಂದರು. 
 

ವೆಬ್ದುನಿಯಾವನ್ನು ಓದಿ