ಲಾಟರಿ ಹಗರಣ: ರಾಜ್ಯಪಾಲರೊಂದಿಗೆ ಹೆಚ್‌ಡಿಕೆ ವಿಸ್ತೃತ ಚರ್ಚೆ

ಗುರುವಾರ, 28 ಮೇ 2015 (12:53 IST)
ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಿದ್ದು, ಬಹುಕೋಟಿ ಹಗರಣ ಎಂದೇ ಕುಖ್ಯಾತಿ ಗಳಿಸಿರುವ ರಾಜ್ಯದ ಒಂದಂಕಿ ಲಾಟರಿ ಹಗರಣ ಸಂಬಂಧ ವಿಸ್ತೃತವಾಗಿ ಚರ್ಚಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. 
 
ಇಂದು ಬೆಳಕ್ಕೆ 11 ಗಂಟೆ ವೇಳೆಯಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ ಕುಮಾರಸ್ವಾಮಿ ಹಾಗೂ ಪಕ್ಷದ ಮತ್ತೋರ್ವ ನಾಯಕ, ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಅವರು ರಾಜ್ಯಪಾಲರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮನವರಿಕೆ ಮಾಡುತ್ತಿದ್ದು, ವಿಸ್ತೃತವಾಗಿ ಚರ್ಚೆಸುತ್ತಿದ್ದಾರೆ ಎನ್ನಲಾಗಿದೆ. 
 
ಈ ಸಂಬಂಧ ಈ ಹಿಂದೆ ಪರಿಶೀಲನೆ ನಡೆಸಿದ್ದ ರಾಜ್ಯ ತನಿಖಾ ಸಂಸ್ಥೆಯ ಸಿಐಡಿ ಅಧಿಕಾರಿಗಳು ಸರ್ಕಾರಕ್ಕೆ ಮಧ್ಯಂತರ ವರದಿ ನೀಡಿ ರಾಜ್ಯ ಪೊಲೀಸ್ ಇಲಾಖೆಯಲ್ಲಿರುವ ಉನ್ನತಧಿಕಾರಿಗಳೇ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಸರ್ಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐಪಿಎಸ್ ಅಧಿಕಾರಿಗಳಾದ ಅಲೋಕ್ ಕುಮಾರ್ ಹಾಗೂ ಧರಣೇಶ್ ಎಂಬ ಇಬ್ಬರು ಅಧಿಕಾರಿಗಳನ್ನು ಸಾರ್ವಜನಿಕ ಸೇವೆಯಿಂದ ಅಮಾನತುಗೊಳಿಸಿದೆ. 
 
ಇನ್ನು ಈ ಪ್ರಕರಣವನ್ನು ರಾಜ್ಯ ಸರ್ಕಾರವು ಈಗಾಗಲೇ ಸಿಬಿಐಗೆ ವಹಿಸಿದ್ದು, ಶೀಘ್ರವೇ ತನಿಖೆ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ. 

ವೆಬ್ದುನಿಯಾವನ್ನು ಓದಿ