ಲಾಟರಿ ಪ್ರಕರಣ: ಗೃಹ ಇಲಾಖೆ ಸಿಬ್ಬಂಧಿ ಭಾಗಿ ಎಂದು ವರದಿ ಸಲ್ಲಿಕೆ

ಶನಿವಾರ, 23 ಮೇ 2015 (10:39 IST)
ರಾಜ್ಯ ಸರ್ಕಾರಕ್ಕೆ ಮಾರಕವಾಗಿ ಕಂಡು ಬಂದಿರುವ ಲಾಟರಿ ಹಗರಣದಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ಮತ್ತು ಪೊಲೀಸ್ ಮಹಾನಿರ್ದೇಶಕ(ಐಜಿಪಿ)ರೂ ಸೇರಿದಂತೆ ಗೃಹ ಇಲಾಖೆಯ ಹಲವು ಮಂದಿ ಹಿರಿಯ ಪೊಲೀಸ್ ಅಧಿಕಾರಿಗಳು ಹೆಸರು ಕೇಳಿ ಬರುತ್ತಿದೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.
 
ಈ ಪ್ರಕಱಣ ಸಂಬಂಧ ರಾಜ್ಯದ ಖ್ಯಾತ ತನಿಖಾ ಸಂಸ್ಥೆಯಾಗಿರುವ ಸಿಐಡಿ ಪೊಲೀಸರು ನಿನ್ನೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ವರದಿಯಲ್ಲಿ ಎಡಿಜಿಪಿ ಮತ್ತು ಐಜಿಪಿ ಸೇರಿದಂತೆ ಹಲವಾರು ಹಿರಿಯ ಪೊಲೀಸ್ ಅಧಿಕಾರಿಗಳು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದಿದ್ದು, ಆ ಎಲ್ಲಾ ಅಧಿಕಾರಿಗಳು ಪ್ರಕರಣದ ಪ್ರಮುಖ ಆರೋಪಿ ಪಾರಿ ರಾಜನ್‌ ಜೊತೆ ನಿರಂತರವಾಗಿ ದೂರವಾಣಿ ಸಂಪರ್ಕದಲ್ಲಿದ್ದರು ಎಂದು ತಿಳಿಸಲಾಗಿದೆ. 
 
ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಪ್ರತಿಕ್ರಿಯಿಸಿದ್ದು, ಸಿಐಡಿ ಪೊಲೀಸರಿಂದ ವರದಿಯನ್ನು ಸ್ವೀಕರಿಸಲಾಗಿದೆ. ಆದರೆ ಪೂರ್ಣ ಮಾಹಿತಿ ಪಡೆದುಕೊಳ್ಳುವವರೆಗೆ ಯಾವುದೇ ಅಧಿಕಾರಿಗಳ ಹೆಸರುಗಳನ್ನು ಬಹಿರಂಗ ಪಡಿಸುವುದಿಲ್ಲ ಎಂದ ಅವರು, ಪ್ರಕರಣದಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಹೆಸರು ಕೇಳಿ ಬಂದಿರುವ ಹಿನ್ನಲೆಯಲ್ಲಿ, ಕೂಲಂಕುಶವಾಗಿ ಪರಿಶೀಲನೆ ನಡೆಸಿದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. 
 
ವರದಿಯ ಪ್ರಕಾರ, ಆರೋಪಿ ರಾಜನ್‌ ಅವರ ದೂರವಾಣಿ ಕರೆಗಳ ಬಗ್ಗೆ ಪರಿಶೀಲಿಸುವಾಗ ಆತನೊಂದಿಗೆ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳು ಸಂಪರ್ಕ ಹೊಂದಿ ಸ್ನೇಹ ಸಂಪಾದಿಸಿದ್ದರು. ಸುಮಾರು 25 ಪೊಲೀಸರ ಹೆಸರು ಈ ಹಗರಣದಲ್ಲಿ ಕೇಳಿಬಂದಿದ್ದು, ನಿವೃತ್ತ ಡಿಜಿಪಿ, 3 ಐಜಿಪಿ, ಇಬ್ಬರು ಎಡಿಜಿಪಿ, ಎಸ್ಪಿ ಮತ್ತು ಡಿವೈಎಸ್‌ಪಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಈಗಾಗಲೇ ಈ ಆರೋಪದ ಮೇಲೆ ಎಸ್ಪಿ ಧರಣೇಶ್‌ ಅಮಾನತುಗೊಂಡಿದ್ದಾರೆ.
 
ಇನ್ನು ಪ್ರಕರಣದಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಅವರ ಹೆಸರೂ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನಾನು ಈ ಹಗರಣದಲ್ಲಿ ಭಾಗಿಯಾಗಿದ್ದೇನೆಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಆರೋಪಿಯಾಗಿರುವ ರಾಜನ್ ನನ್ನ ಕುಟುಂಬ ಪರಿವಾರದ ಹಿತೈಷಿಯಾಗಿದ್ದರು. ಕಳೆದ ಕೆಲವು ವರ್ಷಗಳ ಹಿಂದೆಯಷ್ಟೇ ನಾವಿಬ್ಬರೂ ಸಂಪರ್ಕದಲ್ಲಿದ್ದೇವೆ. ಆದರೆ ಅವರು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದಿರಲಿಲ್ಲ. ಯಾವುದೇ ತನಿಖೆ ಎದುರಿಸಲು ನಾನು ಸಿದ್ಧನಿದ್ದೇನೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ